ಬೆಂಗಳೂರು: ನಗರದಲ್ಲಿ ಕಸ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬಾಡಿಗೆ ಯಂತ್ರಗಳನ್ನು ತರಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ಟೀಕಿಸಿದ್ದಾರೆ. ‘ಎಕ್ಸ್’ನಲ್ಲಿ ಸರ್ಕಾರದ ನಡೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬಿಬಿಎಂಪಿಯಲ್ಲಿರುವ 26 ಕಸ ಗುಡಿಸುವ ಯಂತ್ರಗಳು ಬಳಕೆಯಾಗದೆ ಧೂಳು ಹಿಡಿಯುತ್ತಿರುವ ಸಂದರ್ಭದಲ್ಲಿ, ಡಿಸಿಎಂ ನೇತೃತ್ವದ ಕಾಂಗ್ರೆಸ್ ಸರ್ಕಾರವು 7 ವರ್ಷಗಳಿಗೆ 613 ಕೋಟಿ ರೂಪಾಯಿ ವೆಚ್ಚದಲ್ಲಿ 46 ಯಂತ್ರಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಸಂಪುಟದಲ್ಲಿ ಒಪ್ಪಿಗೆ ನೀಡಿರುವುದನ್ನು ನಿಖಿಲ್ ಪ್ರಶ್ನಿಸಿದ್ದಾರೆ.
ಬಾಡಿಗೆಗೆ ತೆಗೆದುಕೊಳ್ಳಲಿರುವ ಪ್ರತಿಯೊಂದು ಯಂತ್ರಕ್ಕೂ 1.9 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ, ಅದೇ ಯಂತ್ರವನ್ನು ನೇರವಾಗಿ ಖರೀದಿಸಿದರೆ 1.33 ಕೋಟಿ ರೂ. ಸಾಕು ಎಂದು ಅವರು ತಿಳಿಸಿದ್ದಾರೆ.
“ಇದು ಕೆಟ್ಟ ಗಣಿತವಲ್ಲ, ಇದು ಗಣಿತದ ಕೊಲೆ ಮತ್ತು ಸಮಾಧಿ,” ಎಂದು ತೀವ್ರ ವಾಗ್ದಾಳಿ ನಡೆಸಿದ ನಿಖಿಲ್, ತಜ್ಞರ ಸಮಿತಿ ಯಂತ್ರಗಳನ್ನು ಖರೀದಿಸಲು ಶಿಫಾರಸು ಮಾಡಿದ್ದರೂ, ಸರ್ಕಾರ ಅತ್ಯಂತ ದುಬಾರಿ ಆಯ್ಕೆಯನ್ನು ಆರಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಬಿಸಿಜಿ ಸಂಸ್ಥೆಯು ಕಾರ್ಯಕ್ಷಮತೆಯನ್ನು ಆಧರಿಸಿದ ಪಾವತಿ ಮಾದರಿಯನ್ನು ಸಲಹೆ ನೀಡಿದ್ದರೂ, ಸರ್ಕಾರ ಹೊಸ ಆರ್ಥಿಕ ಸಿದ್ಧಾಂತವನ್ನು ರೂಪಿಸಿಕೊಂಡು ಅದಕ್ಕೆ ‘ಆಡಳಿತ’ ಎಂಬ ಲೇಬಲ್ ಅಂಟಿಸಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.



