ಬೆಳಗಾವಿ: ಅಕ್ರಮ ಬಾಂಗ್ಲಾದೇಶಿ ವಲಸಿಗರು ಬೆಳಗಾವಿಗೆ ಪ್ರವೇಶಿಸಿದ್ದಾರೆ ಎಂಬ ಗಂಭೀರ ಶಂಕೆ ಹಿನ್ನೆಲೆ ನಗರದಲ್ಲಿ ಹೈ ಅಲರ್ಟ್ ಘೋಷಿಸಿದ ಪೊಲೀಸರು, ಕೇಂದ್ರ ಬಸ್ ನಿಲ್ದಾಣದಲ್ಲಿ ಭಾರಿ ಕಾರ್ಯಾಚರಣೆ ನಡೆಸಿ 20ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.
ಡಿಸಿಪಿ ನಾರಾಯಣ ಭರಮನಿ ನೇತೃತ್ವದ ತಂಡ, ಮಾಳಮಾರುತಿ ಠಾಣೆಯಲ್ಲಿ ವಶಕ್ಕೆ ಪಡೆದವರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಈ ಕಾರ್ಯಾಚರಣೆಗೆ ಕಾರಣವಾಗಿದ್ದು ಶ್ರೀರಾಮಸೇನೆ ನೀಡಿದ ಮಾಹಿತಿ. “ಹುಬ್ಬಳ್ಳಿಯಿಂದ ಮೂರು ಬಸ್ಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಬಂದಿದ್ದಾರೆ” ಎಂಬ ಆರೋಪದ ಮೇರೆಗೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರು.
ವಿಚಾರಣೆ ವೇಳೆ ವಶಕ್ಕೆ ಪಡೆದವರು ತಾವು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಎಂದು ಹೇಳಿಕೊಂಡಿದ್ದಾರೆ. ಶಹಾಪುರ ಭಾಗದಲ್ಲಿ ಬಂಗಾರದ ಕೆಲಸ ಮಾಡುತ್ತಿರುವುದಾಗಿ ಹಾಗೂ ಮತದಾನಕ್ಕಾಗಿ ಊರಿಗೆ ತೆರಳಿ ಈಗ ಮರಳಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪೊಲೀಸರು ಆಧಾರ್ ಕಾರ್ಡ್, ವೋಟರ್ ಐಡಿ, ಮೊಬೈಲ್ ವಿವರಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದು, ಯಾವುದೇ ತಾಂತ್ರಿಕ ವ್ಯತ್ಯಾಸ ಮೇಲ್ನೋಟಕ್ಕೆ ಪತ್ತೆಯಾಗಿಲ್ಲ. ಆದರೂ ಭದ್ರತಾ ದೃಷ್ಟಿಯಿಂದ ಎಲ್ಲರ ಬೆರಳಚ್ಚುಗಳನ್ನು ಪಡೆದು ಮತ್ತಷ್ಟು ತನಿಖೆ ಮುಂದುವರಿಸಲಾಗಿದೆ.
ಪ್ರಾಥಮಿಕ ಪರಿಶೀಲನೆಯಲ್ಲಿ ಅನುಮಾನಾಸ್ಪದ ಅಂಶಗಳು ಪತ್ತೆಯಾಗದ ಹಿನ್ನೆಲೆಯಲ್ಲಿ, ಬಳಿಕ ಎಲ್ಲ ಕಾರ್ಮಿಕರನ್ನು ಬಿಡುಗಡೆ ಮಾಡಲಾಗಿದೆ. ಆದರೆ ನಕಲಿ ದಾಖಲೆಗಳ ಬಳಕೆ ನಡೆದಿದೆಯೇ ಎಂಬ ಕುರಿತು ಪೊಲೀಸರು ಆಂತರಿಕ ತನಿಖೆ ಮುಂದುವರಿಸಿದ್ದಾರೆ.



