ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲಂಬಾಣಿ ಸಮಾಜ ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ, ಉಡುಗೆ-ತೊಡುಗೆ, ಭಾಷೆಯ ಶ್ರೇಷ್ಠತೆಯಿಂದ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಶ್ರಮ ಜೀವಿಗಳು ಮತ್ತು ಸ್ವಾಭಿಮಾನದ ಪ್ರತೀಕವಾದ ಸಮಾಜದ ಯುವಕರು ದುಶ್ಚಟಗಳಿಂದ ದೂರವಿದ್ದು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ರಾಜಕೀಯ ಕ್ಷೇತ್ರಗಳಲ್ಲಿ ಬೆಳೆಯಬೇಕು ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ತಾಲೂಕಿನ ಬಂಜಾರ (ಲಮಾಣಿ) ಸಮಾಜದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಬಂಜಾರ ಸಮಾಜದಲ್ಲಿ ಸಾಕಷ್ಟು ಪ್ರತಿಭಾವಂತರು ಇದ್ದು, ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟರೆ ಅದರಿಂದ ನಾಡಿಗೆ ಒಳ್ಳೆಯದಾಗುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿ ಬಂಜಾರ ಸಮಾಜದ ಜೊತೆ ಸದಾ ಇದ್ದು, ಅವರ ಅಭ್ಯುಧಯಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ. ತಾಂಡಾ ಅಭಿವೃದ್ಧಿ ನಿಗಮ ಆಗಬೇಕೆಂದು ನಾನು ಮತ್ತು ಸಿ.ಎಂ. ಉದಾಸಿಯವರು ಕ್ಯಾಬಿನೆಟ್‌ನಲ್ಲಿ ಗಟ್ಟಿಯಾಗಿ ಧ್ವನಿಯೆತ್ತಿದ್ದಕ್ಕೆ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆಯಾಯಿತು. ಅಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಮೊದಲನೇ ವರ್ಷದಲ್ಲಿಯೇ ಯಡಿಯೂರಪ್ಪನವರು 3 ಕೋಟಿ ರೂ ಮಂಜೂರು ಮಾಡಿದರು. ಇದರಿಂದ ತಾಂಡಾಗಳಲ್ಲಿ ಬಹಳಷ್ಟು ಸೇವಾಲಾಲರ ಸಮುದಾಯ ಭವನಗಳು ಗ್ರಂಥಾಲಯಗಳು, ಸಿ.ಸಿ. ರಸ್ತೆಗಳು ನಿರ್ಮಾಣವಾದವು.
ಈ ಸಂದರ್ಭದಲ್ಲಿ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಜೆಡಿಎಸ್ ತಾಲೂಕಾ ಅಧ್ಯಕ್ಷ ಪ್ರವೀಣ ಬಾಳಿಕಾಯಿ, ಶಿವಪ್ರಕಾಶ ಮಹಾಜನಶೆಟ್ಟರ, ಶಿರಹಟ್ಟಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಪುಂಡಲೀಕ ಲಮಾಣಿ, ಶಿವಣ್ಣ ಲಮಾಣಿ, ತಾವರಪ್ಪ ಲಮಾಣಿ, ಭೀಮಸಿಂಗ ರಾಥೋಡ, ಪ್ರವೀಣ ಬಾಳಿಕಾಯಿ, ಜಾನು ಲಮಾಣಿ, ಟಾಕ್ರಪ್ಪ ಲಮಾಣಿ, ಶಂಕರ ಕಾರಬಾರಿ, ರವಿ ಲಮಾಣಿ, ಕೃಷ್ಣ ಲಮಾಣಿ, ತುಕ್ಕಪ್ಪ ಲಮಾಣಿ, ಸುರೇಶ ಲಮಾಣಿ, ಫಕೀರಪ್ಪ ಮಾಳಗಿಮನಿ, ಪಾಂಡಪ್ಪ ಲಮಾಣಿ, ಚಂದ್ರು ಲಮಾಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಶಿಗ್ಗಾಂವನಲ್ಲಿ ಪ್ರತಿಯೊಂದು ತಾಂಡಾಗಳು ಅಚ್ಚುಕಟ್ಟಾಗಿ, ಸುಂದರವಾಗಿ ಇದ್ದು, ಲೋಕಸಭಾ ಸದಸ್ಯನಾಗಿ ಆಯ್ಕೆಯಾದ ಮೇಲೆ ಮುಂದಿನ ದಿನಗಳಲ್ಲಿ ಎಲ್ಲ ತಾಂಡಾಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವದಾಗಿ ಭರವಸೆ ನೀಡಿದರಲ್ಲದೆ, ಎಸ್‌ಸಿ ಮೀಸಲು ವಿಷಯದಲ್ಲಿ ಸಮಾಜದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಕಾಂಗ್ರೆಸ್‌ನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದು, ಈ ಬಗ್ಗೆ ಕಿವಿಗೊಡಬೇಡಿ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.