ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಐಟಿ ಹಬ್ ಎಂದು ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಮತ್ತೊಮ್ಮೆ ಸಾರಿಗೆ ವ್ಯವಸ್ಥೆಯ ದುರ್ಬಲತೆ ಬಯಲಿಗೆ ಬಂದಿದ್ದು, ಮೆಟ್ರೋ ರೈಲು ಸೇವೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ.
India's Silicon Valley or India's Biggest Infrastructure Failure? IT Employees Forced to Hitch Rides on Trucks After Yet Another Metro Breakdown
Bengaluru proudly calls itself India's Silicon Valley, a global technology hub that powers innovation, startups, and multinational… pic.twitter.com/qAGDEQfyNj
— Karnataka Portfolio (@karnatakaportf) June 24, 2026
ಜೂನ್ 23ರ ಸಂಜೆ ನಮ್ಮ ಮೆಟ್ರೋ ಸೇವೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ನಗರದ ಪ್ರಮುಖ ಭಾಗಗಳಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ವಿಶೇಷವಾಗಿ ಕಚೇರಿ ಸಮಯದಲ್ಲಿ ಸೇವೆ ಸ್ಥಗಿತಗೊಂಡ ಪರಿಣಾಮ ಸಾವಿರಾರು ಐಟಿ ಉದ್ಯೋಗಿಗಳು ಹಾಗೂ ಸಾರ್ವಜನಿಕರು ಮನೆ ತಲುಪಲು ಹರಸಾಹಸ ಪಟ್ಟರು.
ಮೆಟ್ರೋ ಸೇವೆ ದಿಢೀರ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ನಿಲ್ದಾಣಗಳ ಹೊರಗೆ ಮತ್ತು ರಸ್ತೆಗಳಲ್ಲಿ ಜನಸಂದಣಿ ಹೆಚ್ಚಾಯಿತು. ಈ ವೇಳೆ ಆನ್ಲೈನ್ ಕ್ಯಾಬ್ ಸೇವೆಗಳು ಸಮರ್ಪಕವಾಗಿ ಲಭ್ಯವಾಗದಿದ್ದರೆ, ಹಲವು ಆಟೋ ಚಾಲಕರು ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಿಸಿದ ಆರೋಪಗಳು ಕೇಳಿಬಂದವು.
ಪರಿಣಾಮವಾಗಿ, ಕೆಲ ಪ್ರಯಾಣಿಕರು ಮನೆ ತಲುಪುವ ಅನಿವಾರ್ಯತೆಯಿಂದ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಗಳು ಹಾಗೂ ಟ್ರಕ್ಗಳಿಗೆ ಕೈ ತೋರಿಸಿ, ಅವುಗಳ ಮೂಲಕ ಪ್ರಯಾಣಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವಿಡಿಯೊವನ್ನು Karnataka Portfolio ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಹಲವರು, ಕೃತಕ ಬುದ್ಧಿಮತ್ತೆ (AI), ಸ್ಮಾರ್ಟ್ ಮೊಬಿಲಿಟಿ, ಎಲೆಕ್ಟ್ರಿಕ್ ವಾಹನಗಳು ಹಾಗೂ ಭವಿಷ್ಯದ ಸಾರಿಗೆ ವ್ಯವಸ್ಥೆಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುವ ನಗರದಲ್ಲಿ, ಮೂಲಭೂತ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆಯನ್ನೇ ಖಚಿತಪಡಿಸಲು ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಮೆಟ್ರೋ ಕೈಕೊಡುತ್ತದೆ, ಕ್ಯಾಬ್ಗಳು ಸಿಗುವುದಿಲ್ಲ, ಆಟೋಗಳು ಬರುವುದಿಲ್ಲ, ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಾರೆ. ನಂತರ ಅಧಿಕಾರಿಗಳಿಂದ ಸ್ಪಷ್ಟೀಕರಣ ಬರುತ್ತದೆ. ಮರುದಿನ ಮತ್ತೆ ಇದೇ ಸಮಸ್ಯೆ ಮರುಕಳಿಸುತ್ತದೆ” ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



