ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತನ್ನ ಗ್ರಾಹಕರಿಗೆ ಮಹತ್ವದ ಮುನ್ಸೂಚನೆ ನೀಡಿದ್ದು, ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ ಎಂದು ತಿಳಿಸಿದೆ.
ಜೂನ್ 10ರಿಂದ ಜೂನ್ 30ರವರೆಗೆ ಒಟ್ಟು 21 ದಿನಗಳ ಕಾಲ ಬೆಸ್ಕಾಂನ ಎಲ್ಲಾ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡೇಟಾವನ್ನು ಹಳೆಯ ಸಾಫ್ಟ್‌ವೇರ್‌ನಿಂದ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗೆ ವರ್ಗಾಯಿಸುವ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ಸ್ಥಗಿತ ಅಗತ್ಯವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಈ ಅವಧಿಯಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಕೆ, ಮಾಲೀಕತ್ವ ಬದಲಾವಣೆ, ಲೋಡ್ ಹೆಚ್ಚಳ ವಿನಂತಿ ಹಾಗೂ ಆನ್‌ಲೈನ್ ಬಿಲ್ ಪಾವತಿ ಸೇರಿದಂತೆ ಹಲವು ಪ್ರಮುಖ ಸೇವೆಗಳು ಬೆಸ್ಕಾಂ ಪೋರ್ಟಲ್ ಮತ್ತು ಆಪ್ ಮೂಲಕ ಲಭ್ಯವಿರುವುದಿಲ್ಲ.
ಆದರೆ ಗ್ರಾಹಕರು ಫೋನ್‌ಪೇ, ಗೂಗಲ್‌ಪೇ, ಅಮೆಜಾನ್‌ಪೇ ಸೇರಿದಂತೆ ಯುಪಿಐ ಮಾಧ್ಯಮಗಳ ಮೂಲಕ ವಿದ್ಯುತ್ ಬಿಲ್ ಪಾವತಿಯನ್ನು ಮುಂದುವರಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಸಾಫ್ಟ್‌ವೇರ್ ಅಪ್‌ಗ್ರೇಡ್ ಪ್ರಕ್ರಿಯೆಯಿಂದ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



