HomeGadag Newsಉದ್ಯಾನ ನಿರ್ಮಾಣಕ್ಕೆ ಕ್ರಿಯಾಯೋಜನೆ : ಜಿ.ಎಸ್. ಪಾಟೀಲ

ಉದ್ಯಾನ ನಿರ್ಮಾಣಕ್ಕೆ ಕ್ರಿಯಾಯೋಜನೆ : ಜಿ.ಎಸ್. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರೋಣ : ತಾಲೂಕಿನ ಜಿಗಳೂರ ಕೆರೆಯ ತಟದಲ್ಲಿ ವರ್ಣರಂಜಿತ ಉದ್ಯಾನವನ್ನು ನಿರ್ಮಿಸುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಲಾಗುವುದು ಎಂದು ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ರೋಣ ಪಟ್ಟಣದಲ್ಲಿ 20 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದ್ವಿಪಥ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ರೋಣ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಅತಿ ಹೆಚ್ಚು ರೈತರಿದ್ದಾರೆ. ಹೀಗಾಗಿ ದವಸ ಧಾನ್ಯಗಳನ್ನು ಸಂಗ್ರಹ ಮಾಡಲು ಅನೇಕ ಗೋದಾಮುಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಲಾಗಿದ್ದು, ಈಗ ಪಟ್ಟಣದ ಸೌಂದರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. 2 ಕಿಮಿಗೂ ಹೆಚ್ಚು ದೂರ ದ್ವಿಪಥ ಸಿಸಿ ರಸ್ತೆ, ಚರಂಡಿ, ಸಂಚಾರಿಗಳಿಗೆ ಪ್ರತ್ಯೇಕ ರಸ್ತೆಯನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.

ಜಿಗಳೂರ ಕೆರೆಯನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದ್ದು, ಈ ಸ್ಥಳದಲ್ಲಿ ವರ್ಣರಂಜಿತ ಉದ್ಯಾನವನ್ನು ನಿರ್ಮಿಸಲು ಈಗಾಗಲೇ ಕ್ರಿಯಾಯೋಜನೆಯನ್ನು ರೂಪಿಸಲಾಗಿದೆ. ಇನ್ನು ಕೆಲ ದಿನಗಳಲ್ಲಿ ಉದ್ಯಾನವನ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದ್ದು, ನಾಗರಿಕ ಸಮುದಾಯಕ್ಕೆ ಅದೊಂದು ಪ್ರವಾಸಿ ತಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈಗಾಗಲೇ ಜೆಟಿಟಿಸಿ ಮಹಾವಿದ್ಯಾಲಯ ಆರಂಭಗೊಂಡಿದ್ದು, 3 ಎಕರೆ ಜಮೀನಿನಲ್ಲಿ 50 ಕೋಟಿ ರೂಗಳ ವೆಚ್ಚದಲ್ಲಿ ಮಹಾವಿದ್ಯಾಲಯದ ಕಟ್ಟಡ ನಿರ್ಮಾಣವಾಗಲಿದೆ. ಅಲ್ಲದೆ ರೋಣ ಸರಕಾರಿ ಆಸ್ಪತ್ರೆಗೆ ಗುಣಮಟ್ಟದ ಸಲಕರಣೆಗಳನ್ನು ಒದಗಿಸಲು 50 ಲಕ್ಷ ರೂಗಳ ಅನುದಾನವನ್ನು ಸಹ ತರಲಾಗಿದೆ. ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕಾಗಿ ಪಿಯುಸಿ ಕಾಲೇಜು ಹಾಗೂ ವಸತಿ ನಿಲಯ ಮಂಜೂರಾಗಿದ್ದಲ್ಲದೆ, ಬಿಸಿಎಂ ಇಲಾಖೆಗೂ ಸಹ ಎರಡು ವಸತಿ ನಿಲಯಗಳು ಮಂಜೂರಾಗಿವೆ. ಕುರಹಟ್ಟಿ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ ನೀಡಲಾಗಿದೆ ಎಂದರು.

ಪುರಸಭೆಯ ಅಧ್ಯಕ್ಷೆ ಗೀತಾ ಮಾಡಲಗೇರಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ವಿ.ಆರ್. ಗುಡಿಸಾಗರ, ಬಸವರಾಜ ನವಲಗುಂದ, ಪರಶುರಾಮ ಅಳಗವಾಡಿ, ವಿದ್ಯಾ ದೊಡ್ಡಮನಿ, ವಿ.ಎಂ. ಪಾಟೀಲ, ಭೀಮಣ್ಣ ನಾಯ್ಕ, ಬಾವಾಸಾಬ ಬಟಗೇರಿ, ವಿ.ಬಿ. ಸೋಮನಕಟ್ಟಿಮಠ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ರೈತರು ಬೆಳೆದ ಬೆಳೆಗಳ ಸಂರಕ್ಷಣೆಗೆ 2 ಎಕರೆ ಜಮೀನಿನಲ್ಲಿ ಹವಾನಿಯಂತ್ರಿತ ಬೃಹತ್ ಕಟ್ಟಡ ನಿರ್ಮಾಣ, 50 ಲಕ್ಷ ರೂಗಳ ವೆಚ್ಚದಲ್ಲಿ ಪಟ್ಟಣದ ಮಧ್ಯದಲ್ಲಿರುವ ಕೆರೆಯ ಅಭಿವೃದ್ಧಿ, 4 ಕೋಟಿ ರೂ ವೆಚ್ಚದ ಎಂಆರ್‌ಬಿಸಿ ಪ್ರವಾಸಿ ಮಂದಿರ ಹಾಗೂ 1 ಕೋಟಿ ರೂ ವೆಚ್ಚದಲ್ಲಿ ರಾಜೂರ ಬಳಿಯಿರುವ ಪರಿವೀಕ್ಷಣಾ ಮಂದಿರದ ಸುಧಾರಣೆಗೆ ಶೀಘ್ರವೇ ಭೂಮಿಪೂಜೆಯನ್ನು ನೆರವೇರಿಸಲಾಗುವುದು.
– ಜಿ.ಎಸ್. ಪಾಟೀಲ.
ಶಾಸಕರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!