ಬೆಂಗಳೂರು: ನಗರದ ಸ್ವಚ್ಛತಾ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಮಹತ್ವದ ಯೋಜನೆ ರೂಪಿಸಿದೆ.
ಇದರಡಿ ಬೆಂಗಳೂರಿನ ಸುಮಾರು 18 ಸಾವಿರ ಪೌರಕಾರ್ಮಿಕರನ್ನು ರಾಜ್ಯದ ವಿವಿಧ ನಗರಗಳಿಗೆ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಲಾಗಿದೆ.
‘ಸ್ವಚ್ಛ ಭಾರತ್ ಮಿಷನ್ (ನಗರ) 2.0’ ಯೋಜನೆಯಡಿ ಹಂತ ಹಂತವಾಗಿ ಈ ಕಾರ್ಯಕ್ರಮ ಜಾರಿಯಾಗಲಿದ್ದು, ಇದೇ ತಿಂಗಳಿಂದ ಪ್ರವಾಸ ಆರಂಭವಾಗುವ ಸಾಧ್ಯತೆ ಇದೆ.
ಮೊದಲ ಹಂತದಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ಮೈಸೂರು, ದಾವಣಗೆರೆ ಹಾಗೂ ಹೊಸಪೇಟೆ ಸೇರಿದಂತೆ ರಾಜ್ಯದ ಆರು ನಗರಗಳಿಗೆ ಪೌರಕಾರ್ಮಿಕರನ್ನು ಕರೆದೊಯ್ಯಲಾಗುತ್ತದೆ.
ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸ್ಥಾನ ಪಡೆದಿರುವ ನಗರಗಳ ತ್ಯಾಜ್ಯ ವಿಂಗಡಣೆ, ಮರುಬಳಕೆ, ಸ್ವಚ್ಛತಾ ನಿರ್ವಹಣೆ, ಸುರಕ್ಷತಾ ಕ್ರಮಗಳು ಹಾಗೂ ನಾಗರಿಕರ ಸಹಭಾಗಿತ್ವದ ಮಾದರಿಗಳನ್ನು ಬೆಂಗಳೂರಿನ ಪೌರಕಾರ್ಮಿಕರಿಗೆ ಪರಿಚಯಿಸುವುದು ಯೋಜನೆಯ ಉದ್ದೇಶವಾಗಿದೆ.
ಈ ಅಧ್ಯಯನ ಪ್ರವಾಸದ ಅನುಷ್ಠಾನಕ್ಕಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಸುಮಾರು ₹1.96 ಕೋಟಿ ಅಂದಾಜು ವೆಚ್ಚದ ಟೆಂಡರ್ ಆಹ್ವಾನಿಸಿದೆ.
ಆಯ್ಕೆಯಾಗುವ ಸಂಸ್ಥೆಯು ಪೌರಕಾರ್ಮಿಕರ ಪ್ರವಾಸ, ಸಾರಿಗೆ ವ್ಯವಸ್ಥೆ ಸೇರಿದಂತೆ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ವಹಿಸಲಿದೆ. ಮೊದಲ ಹಂತದ ಕಾರ್ಯಕ್ರಮ ಸುಮಾರು ಆರು ತಿಂಗಳ ಅವಧಿಯಲ್ಲಿ ನಡೆಯಲಿದೆ.
ಆದರೆ ಈ ಯೋಜನೆಗೆ ಪೌರಕಾರ್ಮಿಕರ ಸಂಘದ ಒಂದು ವಲಯ ಆಕ್ಷೇಪ ವ್ಯಕ್ತಪಡಿಸಿದೆ.
ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಅಧ್ಯಯನ ಪ್ರವಾಸಕ್ಕಿಂತ ಹೆಚ್ಚುವರಿ ಸಿಬ್ಬಂದಿಯ ಅಗತ್ಯವಿದೆ ಎಂದು ಗ್ರೇಟರ್ ಬೆಂಗಳೂರು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪಿ.ಎನ್. ಮುತ್ತ್ಯಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಪ್ರತಿದಿನ 5 ಸಾವಿರ ಟನ್‌ಗೂ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಎಲ್ಲ ಪೌರಕಾರ್ಮಿಕರನ್ನು ಪ್ರವಾಸಕ್ಕೆ ಕಳುಹಿಸುವ ಬದಲು ಪ್ರತಿ ವಾರ್ಡ್‌ನಿಂದ ಕೆಲವರನ್ನು ಆಯ್ಕೆ ಮಾಡಿ, ಅವರು ಕಲಿತ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ವ್ಯವಸ್ಥೆ ಮಾಡಿದರೆ ಹೆಚ್ಚು ಪರಿಣಾಮಕಾರಿ ಎಂದು ಅವರು ಹೇಳಿದ್ದಾರೆ.



