ಬೆಂಗಳೂರು: ಜಗತ್ತಿನಾದ್ಯಂತ ಹೆಚ್ಚಿನ ದೇಶಗಳು ಇಂದು ಸೈಬರ್ ಕ್ರೈಮ್ ಅಪರಾಧದಿಂದ ತತ್ತರಿಸಿ ಹೋಗಿವೆ. ಸೈಬರ್ ಅಪರಾಧದ ಒಂದು ಭಾಗ ಎಂದೆನಿಸಿರುವ ಸೈಬರ್ ಕ್ರೈಮ್ ಕಂಪ್ಯೂಟರ್ ಅಥವಾ ಇಂಟರ್ನೆಟ್ ಮೂಲಕ ನಡೆಸುವ ಕಳ್ಳತನವಾಗಿದೆ. ಅದೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ವಂಚನೆ ಪ್ರಕರಣ ನಡೆದಿದೆ.
ಇದು ಅಂತಿಂಥ ವಂಚನೆ ಅಲ್ಲವೇ ಅಲ್ಲ. ಇಷ್ಟು ದಿನ ಸಣ್ಣ ಪುಟ್ಟ ವಂಚನೆ ಕೇಸ್ಗಳು ಮುನ್ನೆಲೆಗೆ ಬರುತ್ತಿದ್ದವು. ಇದೀಗ ಬೆಂಗಳೂರಿನಲ್ಲಿ ಅತಿ ದೊಡ್ಡ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಒಂದಲ್ಲಾ, ಎರಡಲ್ಲಾ ಬರೋಬ್ಬರಿ 49ಕೋಟಿ ದೋಚಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಬೆಳಗಾವಿ ಮೂಲದ ಇಸ್ಮಾಯಿಲ್ ಅತ್ತರ್ ಮತ್ತು ಪಟೇಲ್ ಎಂಬವರನ್ನು ಬೆಂಗಳೂರು ಸೈಬರ್ ಅಪರಾಧ ವಿಭಾಗದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ವಿಸ್ಡಮ್ ಫೈನಾನ್ಸ್ ಕಂಪನಿಯ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಸುಮಾರು ₹49 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ.
ಆರೋಪಿಗಳು ವಿಪಿಎನ್ ನೆಟ್‌ವರ್ಕ್ (VPN Network) ಬಳಸಿ ಕಂಪನಿಯ ಖಾತೆ ಹ್ಯಾಕ್ ಮಾಡಿ, ಕದ್ದ ಹಣವನ್ನು 600 ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿ ಇಸ್ಮಾಯಿಲ್‌ನ ಬ್ಯಾಂಕ್ ಖಾತೆಯಲ್ಲಿ ₹10 ಕೋಟಿ ಹಣವನ್ನು ಫ್ರೀಜ್ ಮಾಡಲಾಗಿದೆ. ಜೊತೆಗೆ ಆತನಿಂದ ಲ್ಯಾಪ್‌ಟಾಪ್ʼಗಳನ್ನು ವಶಕ್ಕೆ ಪಡೆಯಲಾಗಿದೆ.
ಆಗಸ್ಟ್ 7ರಂದು ಮಾರತಹಳ್ಳಿಯಲ್ಲಿನ ವಿಸ್ಡಮ್ ಫೈನಾನ್ಸ್ ಕಂಪನಿ ಅಕೌಂಟ್ ಹ್ಯಾಕ್ ಆಗಿದ್ದು, ಈ ಬಗ್ಗೆ ಆ. 9ರಂದು ಫೈನಾನ್ಸ್ನ ಮ್ಯಾನೇಜರ್ ಪ್ರಕಾಶ್ ದೂರು ನೀಡಿದ್ದರು. ಈ ಆಧಾರದಲ್ಲಿ ಸಿಸಿಬಿ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ರಾಜ್ಯ ಹಾಗೂ ಹೈದರಾಬಾದ್ನಲ್ಲಿ ಆರೋಪಿಗಳಿಗೆ ಹುಡುಕಾಟ ನಡೆಸಿದ್ದರು.
ತನಿಖೆ ವೇಳೆ ಆರೋಪಿಗಳು ವಿದೇಶದಲ್ಲಿ ಕುಳಿತು ವಿಪಿಎನ್ ನೆಟ್‌ವರ್ಕ್ ಬಳಸಿ ಅಕೌಂಟ್ ಹ್ಯಾಕ್ ಮಾಡಿರೋದು ಗೊತ್ತಾಗಿತ್ತು. ದೋಚಿದ ಹಣವನ್ನ 653 ನಕಲಿ ಅಕೌಂಟ್ಗೆ ಟ್ರಾನ್ಸ್ಫರ್ ಮಾಡಿದ್ದರು. ವಿಸ್ಡಮ್ ಫೈನಾನ್ಸ್ನ ಎರಡು ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿರೋದು ತನಿಖೆ ವೇಳೆ ಪತ್ತೆಯಾಗಿತ್ತು.
ಕೇವಲ ಎರಡೂವರೆ ಗಂಟೆಗಳಲ್ಲಿ 49 ಕೋಟಿ ಹಣವನ್ನ ಗ್ಯಾಂಗ್ ದೋಚಿದ್ದು, ಒಟ್ಟು 1,782 ಟ್ರಾನ್ಸಾಕ್ಷನ್ ನಡೆಸಲಾಗಿತ್ತು. ಬಂಧಿತ ಆರೋಪಿಗಳಿಂದ ಲ್ಯಾಪ್‌ಟಾಪ್ , ಪೆನ್ ಡ್ರೈವ್ ವಶಕ್ಕೆ ಪಡೆಯಲಾಗಿದೆ. ನಾಪತ್ತೆಯಾಗಿರುವ ಉಳಿದ 5 ಆರೋಪಿಗಳಿಗೆ ಹುಡುಕಾಟ ಮುಂದುವರಿದಿದೆ. ಮಾಹಿತಿ ಪ್ರಕಾರ ಮೂವರು ದುಬೈನಲ್ಲಿದ್ದಾರೆ. ಇನ್ನು ಇಬ್ಬರು ಹಾಂಕಾಂಗ್ನಲ್ಲಿ ಇದ್ದಾರೆ ಎನ್ನಲಾಗಿದೆ.



