ಮಂಡ್ಯ:- ಜಿಲ್ಲೆಯಲ್ಲಿ ಮಹಿಳೆಯರ ಮಾಂಗಲ್ಯ ಸರ ಅಪಹರಣ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಖದೀಮರನ್ನು ಮಂಡ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಕ್‌ಗಳಲ್ಲಿ ಬಂದು ಮಹಿಳೆಯರಿಂದ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ದ ಮೈಸೂರು ನಿವಾಸಿಗಳಾದ ಸದ್ದಾಂ ಹುಸೇನ್ ಅಲಿಯಾಸ್ ಸದ್ದಾಂ ಹಾಗೂ ಸೈಯ್ಯದ್ ಅಯೂಬ್ ಎಂಬ ಇಬ್ಬರನ್ನು ಮೈಸೂರಿನ ರಾಜೀವ್ ನಗರದಲ್ಲಿ ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 253 ಗ್ರಾಂ ಚಿನ್ನಾಭರಣ, 178 ಗ್ರಾಂ ಬೆಳ್ಳಿಯ ಒಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಮತ್ತು ಆಕ್ಸಿಸ್ ಬೈಕ್ ಸೇರಿ ಒಟ್ಟು 31.98 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕಿರುಗಾವಲು ಠಾಣಾ ವ್ಯಾಪ್ತಿಯಲ್ಲಿ ನಡೆದ ಮಾಂಗಲ್ಯ ಸರ ಕಸಿತ ಪ್ರಕರಣದ ತನಿಖೆ ವೇಳೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಪರಿಣಾಮ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.



