ಬೆಂಗಳೂರು: ಟ್ಯಾಟೂ ಆರ್ಟಿಸ್ಟ್ ಹಾಗೂ ನಟ ಅರ್ಜುನ್ ವಿರುದ್ಧ ಮಹಿಳೆಯೊಬ್ಬರು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಆತ್ಮೀಯವಾಗಿದ್ದ ಅರ್ಜುನ್, ಬಳಿಕ ಖಾಸಗಿ ಫೋಟೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಣ ಪಡೆದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಸುಮಾರು ಎರಡು ವರ್ಷಗಳ ಹಿಂದೆ ಟ್ಯಾಟೂ ಹಾಕಿಸಿಕೊಳ್ಳಲು ತೆರಳಿದ್ದಾಗ ಅರ್ಜುನ್ ಪರಿಚಯವಾಗಿದ್ದಾಗಿ ಮಹಿಳೆ ತಿಳಿಸಿದ್ದಾರೆ. ನಂತರ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು ಎನ್ನಲಾಗಿದೆ. ಮಹಿಳೆಯ ಪತಿ ಮೃತಪಟ್ಟಿರುವ ವಿಚಾರ ತಿಳಿದಿದ್ದ ಅರ್ಜುನ್, ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ಮಹಿಳೆಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದ ಎಂದು ಆರೋಪಿಸಲಾಗಿದೆ. 2024ರ ನವೆಂಬರ್‌ನಿಂದ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದು, ಹಣ ನೀಡದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿದ್ದಾರೆ.
ಹಂತ ಹಂತವಾಗಿ ಸುಮಾರು 9 ಲಕ್ಷ ರೂಪಾಯಿ ಹಣ ಪಡೆದಿದ್ದ ಅರ್ಜುನ್, ಮತ್ತೆ ಹಣ ಕೇಳಿದಾಗ ಮಹಿಳೆ ಹಣ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಸೆಪ್ಟೆಂಬರ್ 2ರಂದು ಮಹಿಳೆಯ ಮನೆಗೆ ಬಂದ ಅರ್ಜುನ್, ಕರೆ ಸ್ವೀಕರಿಸದ ಬಗ್ಗೆ ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಬೇರೆ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೂ ಕೆಲ ದಿನಗಳ ಹಿಂದೆ ಅರ್ಜುನ್ ಕೂಡ ಮಹಿಳೆ ವಿರುದ್ಧ ದೂರು ನೀಡಿದ್ದ. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಅರ್ಜುನ್ ಆರೋಪಿಸಿದ್ದ ಎನ್ನಲಾಗಿದೆ.
ಹೀಗಾಗಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಹಾಗೂ ಮಹಿಳೆ ಪರಸ್ಪರ ದೂರು ನೀಡಿದ್ದು, ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



