ಬೆಂಗಳೂರು: ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಬಳಸಿ ಕ್ಲಿನಿಕ್ ಮಾಲೀಕರನ್ನು ಬ್ಲ್ಯಾಕ್ಮೇಲ್ ಮಾಡಿ ಕೋಟಿ ರೂ.ಗಳ ಬೇಡಿಕೆ ಇಟ್ಟಿರುವ ಘಟನೆ ಜಯನಗರದಲ್ಲಿ ನಡೆದಿದೆ
ನಗರದ ಬೆಂಗಳೂರು ಜಯನಗರ ಪ್ರದೇಶದಲ್ಲಿ ನಡೆದ ಈ ಪ್ರಕರಣದಲ್ಲಿ, ಮೇಕಪ್ ಕ್ಲಿನಿಕ್ ಮಾಲೀಕ ಕಾರ್ತಿಕ್ ಪುತಾ ಅವರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ದೂರು ನೀಡಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರಿನ ಪ್ರಕಾರ, ಕ್ಲಿನಿಕ್ ಪ್ರಚಾರದ ಉದ್ದೇಶದಿಂದ ಕಾರ್ತಿಕ್ ಪುತಾ ಅವರು ಸಾಧನಾ ಶೆಟ್ಟಿಯನ್ನು ಸಂಪರ್ಕಿಸಿದ್ದರು. ನಂತರ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಖಾಸಗಿ ಫೋಟೋ ಮತ್ತು ವಿಡಿಯೋಗಳು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಈ ವಿಷಯವನ್ನು ಆಧಾರವಾಗಿಸಿಕೊಂಡು, 1.5 ಕೋಟಿ ರೂ. ನೀಡದಿದ್ದರೆ ಕುಟುಂಬಕ್ಕೆ ಮಾಹಿತಿ ಬಹಿರಂಗ ಮಾಡುವುದಾಗಿ ಸಾಧನಾ ಶೆಟ್ಟಿ ಬೆದರಿಕೆ ಹಾಕಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಆರಂಭದಲ್ಲಿ ಭಯಗೊಂಡ ಕಾರ್ತಿಕ್, ಆನ್ಲೈನ್ ಮೂಲಕ 5 ಲಕ್ಷ ರೂ. ಹಾಗೂ ನಗದು ರೂಪದಲ್ಲಿ ಇನ್ನೂ 5 ಲಕ್ಷ ರೂ. ನೀಡಿದ್ದಾಗಿ ತಿಳಿಸಿದ್ದಾರೆ. ಜೊತೆಗೆ, ಒಂದು ಐಫೋನ್ ಕೂಡ ನೀಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಷ್ಟೆಲ್ಲಾ ಆದರೂ ಮತ್ತೆ ಹೆಚ್ಚಿನ ಮೊತ್ತದ ಬೇಡಿಕೆ ಮುಂದುವರಿದಿದ್ದು, ಹಣ ನೀಡಲು ನಿರಾಕರಿಸಿದ ಬಳಿಕ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಕಾರ್ತಿಕ್ ಅವರ ಪತ್ನಿಗೆ ವಾಟ್ಸಾಪ್ ಮೂಲಕ ಕಳುಹಿಸಿರುವುದಾಗಿ ಆರೋಪಿಸಲಾಗಿದೆ. ಇದರಿಂದ ಕುಟುಂಬದಲ್ಲಿ ಕಲಹ ಉಂಟಾದ ಹಿನ್ನೆಲೆಯಲ್ಲಿ, ಕಾರ್ತಿಕ್ ಕೊನೆಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ದೂರು ಆಧರಿಸಿ ಪೊಲೀಸರು ಸಾಧನಾ ಶೆಟ್ಟಿಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ ವಿಚಾರಣೆ ವೇಳೆ ತಮ್ಮ ಬಳಿ ಯಾವುದೇ ವಿಡಿಯೋ ಇಲ್ಲ ಎಂದು ಸಾಧನಾ ಶೆಟ್ಟಿ ಸ್ಪಷ್ಟಪಡಿಸಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



