ವಿಜಯಸಾಕ್ಷಿ ಸುದ್ದಿ, ಗದಗ: ಈದ್ ಮಿಲಾದ್-ಉನ್-ನಬಿ ಅಂಗವಾಗಿ ನಗರದ ಐಎಂಎ ರಕ್ತನಿಧಿಯ ಸಹಯೋಗದಲ್ಲಿ ಈದ್ ಮಿಲಾದ್-ಉನ್-ನಬಿ ಸಮಿತಿಯಿಂದ ರಕ್ತದಾನ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಪ್ರವಾದಿ ಮುಹಮ್ಮದ್ (ಸ.ಅ.ಸ.) ಅವರ ಜನ್ಮದಿನಾಚರಣೆಯ ಅಂಗವಾಗಿ ನಡೆದ ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆ ನಡೆಸಲಾಯಿತು.
ಸಮುದಾಯದಲ್ಲಿ ಹೆಚ್ಚುತ್ತಿರುವ ಮಧುಮೇಹ ಸಮಸ್ಯೆಯ ಹಿನ್ನೆಲೆಯಲ್ಲಿ ರೋಗನಿರ್ಣಯವಾಗದ ಪ್ರಕರಣಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಉದ್ದೇಶದಿಂದ ಸಕ್ಕರೆ ಪರೀಕ್ಷೆ ನಡೆಸಲಾಯಿತು.
ಶಿಬಿರವನ್ನು ಡಾ. ಪ್ಯಾರಾಲಿ ನೂರಾನಿ, ಐಎಂಎ ರಕ್ತನಿಧಿಯ ಅಧ್ಯಕ್ಷ ಡಾ. ಅಜಯ್ ರಾಜು, ಕಾರ್ಯದರ್ಶಿ ಡಾ. ಅರವಿಂದ್ ಕೆ. ಹಾಗೂ ಡಾ. ಪವಾಡಶೆಟ್ಟರ್ ಸಂಯೋಜಿಸಿದರು.
ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಿದ ವೈದ್ಯರು, ಸ್ವಯಂಸೇವಕರು ಹಾಗೂ ಸಿಬ್ಬಂದಿಗೆ ಈದ್ ಮಿಲಾದ್-ಉನ್-ನಬಿ ಸಮಿತಿ ಮತ್ತು ಸಂಘಟಕರು ಕೃತಜ್ಞತೆ ಸಲ್ಲಿಸಿದರು.



