ಬಂಟ್ವಾಳ: ಧಾರಾಕಾರ ಮಳೆಯ ನಡುವೆ ಮಿನಿ ಸೇತುವೆ ದಾಟುತ್ತಿದ್ದ ವೇಳೆ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಜೀವನ್ ಪಿಂಟೊ (48) ಅವರ ಮೃತದೇಹ ಅರಳ ಗ್ರಾಮದ ಪಂಬದಗದ್ದೆ ಬಳಿ ಪತ್ತೆಯಾಗಿದ್ದು, ಎರಡು ದಿನಗಳ ಶೋಧ ಕಾರ್ಯಾಚರಣೆ ದುರಂತ ಅಂತ್ಯ ಕಂಡಿದೆ.
ರಾಯಿ ಗ್ರಾಮದ ಪಾಂಚಕೋಡಿ ನಿವಾಸಿಯಾಗಿದ್ದ ಜೀವನ್ ಪಿಂಟೊ ಆಗಸ್ಟ್ 1ರ ರಾತ್ರಿ ಮಾವನ ಮನೆಗೆ ನಡೆದುಕೊಂಡು ತೆರಳಿದ್ದರು. ಮಳೆ ಮತ್ತು ಕತ್ತಲಿನ ನಡುವೆಯೇ ಟಾರ್ಚ್ ಹಿಡಿದು ಮಿನಿ ಸೇತುವೆ ದಾಟುತ್ತಿದ್ದ ವೇಳೆ ಅವರು ನಾಪತ್ತೆಯಾಗಿದ್ದರು. ಬಳಿಕ ತೋಡಿನ ಬಳಿ ಅವರ ಚಪ್ಪಲಿ ಮತ್ತು ಟಾರ್ಚ್ ಪತ್ತೆಯಾಗಿದ್ದರಿಂದ ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿತ್ತು.
ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಗ್ರಾಮಾಂತರ ಪೊಲೀಸರು, ಅಗ್ನಿಶಾಮಕ ದಳ, ಎನ್ಡಿಆರ್ಎಫ್ ತಂಡ ಹಾಗೂ ಸ್ಥಳೀಯರು ನಿರಂತರ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ನೀರಿನ ಹರಿವು ಹೆಚ್ಚಿದ್ದರಿಂದ ಕಾರ್ಯಾಚರಣೆಗೆ ಅಡಚಣೆ ಉಂಟಾದರೂ ಹುಡುಕಾಟ ಮುಂದುವರಿಸಲಾಗಿತ್ತು.
ಸೋಮವಾರ ಬೆಳಗ್ಗೆ ಅರಳ ಗ್ರಾಮದ ಪಂಬದಗದ್ದೆ ಸಮೀಪ ಜೀವನ್ ಪಿಂಟೊ ಅವರ ಮೃತದೇಹ ಪತ್ತೆಯಾಗಿದ್ದು, ಎನ್ಡಿಆರ್ಎಫ್ ತಂಡ ಮೃತದೇಹವನ್ನು ಮೇಲಕ್ಕೆತ್ತಿ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.
ಘಟನೆಯಿಂದ ಕುಟುಂಬಸ್ಥರು ತೀವ್ರ ದುಃಖಕ್ಕೊಳಗಾಗಿದ್ದು, ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಮಳೆಗಾಲದಲ್ಲಿ ಹೊಳೆ, ಹಳ್ಳ ಹಾಗೂ ತೋಡುಗಳ ಬಳಿ ಅನಗತ್ಯವಾಗಿ ಓಡಾಟ ಮಾಡದಂತೆ ಹಾಗೂ ನೀರಿನ ಹರಿವು ಹೆಚ್ಚಿರುವ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಸಂಚರಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.



