ಹುಬ್ಬಳ್ಳಿ:- ಸಿಎಂ-ಡಿಸಿಎಂ ಇಬ್ಬರೂ ಒಬ್ಬರಿಗೊಬ್ಬರು ಬಾವಿಯಲ್ಲಿ ಕೆಡವಲು ನೋಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಒಬ್ಬರಿಗೊಬ್ಬರು ಬಾವಿಯಲ್ಲಿ ಕೆಡವಲು ನೋಡುತ್ತಿದ್ದಾರೆ ಅಷ್ಟೇ. ಇಬ್ಬರೂ ಸಿಎಂ ಮತ್ತು ಅಧಿಕಾರ ಹಂಚಿಕೆ ವಿಚಾರದಲ್ಲಿ ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎನ್ನುತ್ತಾರೆ. ಹಾಗಾದರೆ ಇಲ್ಲಿ ಇವರು ಬ್ರೇಕ್ ಫಾಸ್ಟ್ ನೆಪದಲ್ಲಿ ಅರ್ಧ ಇಡ್ಲಿ ತಿನ್ನಬೇಕಿತ್ತೇ ಎಂದು ವ್ಯಂಗ್ಯವಾಡಿದರು.
ಸಿಎಂ ಕುರ್ಚಿಗಾಗಿ ಸಿಎಂ – ಡಿಸಿಎಂ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಮೇಲ್ನೋಟಕ್ಕೆ ಎಲ್ಲವನ್ನೂ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎನ್ನುತ್ತಿದ್ದಾರೆ. ಆದರೆ ಇವರಿಬ್ಬರೂ ಜಟಾಪಟಿ ಮಾತ್ರ ಬಿಟ್ಟಿಲ್ಲ. ಇಬ್ಬರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಖರ್ಗೆ ಅವರದ್ದು ಏನೂ ನಡೆಯುವುದಿಲ್ಲ. ಎಲ್ಲಾ ನಕಲಿ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರದ್ದೇ ಫೈನಲ್. ಹಾಗಾಗಿ ಖರ್ಗೆ ಹೈಕಮಾಂಡ್ ಮೇಲೆ ಎತ್ತಿ ಹಾಕುತ್ತಿದ್ದಾರೆ ಎಂದು ಜೋಶಿ ಹೇಳಿದರು.
ಸಿಎಂ, ಡಿಸಿಎಂ ಒಗ್ಗಟ್ಟಿನ ಮಂತ್ರ ಜಪಿಸುತ್ತಲೇ ಜೈಲಿಗೂ ಹೋಗಿ ಶಾಸಕರ ಬೆಂಬಲ ಕೋರುತ್ತಿದ್ದಾರೆ. ಅಂದರೆ ಸಿಎಂ ಗದ್ದುಗೆ ಜಟಾಪಟಿ ಕಾಂಗ್ರೆಸ್ ನಲ್ಲಿ ಅದೆಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂಬುದನ್ನು ತೋರ್ಪಡಿಸುತ್ತದೆ. ಬ್ರೇಕ್‌ಫಾಸ್ಟ್, ಒಗ್ಗಟ್ಟು ಎಂಬುದೆಲ್ಲಾ ಒಂದು ನಾಟಕ ಎಂದು ಜೋಶಿ ಲೇವಡಿ ಮಾಡಿದರು.



