HomeGadag Newsಸೇತುವೆ ನಿರ್ಮಿಸದಿದ್ದರೆ ಚುನಾವಣೆ ಬಹಿಷ್ಕಾರ!

ಸೇತುವೆ ನಿರ್ಮಿಸದಿದ್ದರೆ ಚುನಾವಣೆ ಬಹಿಷ್ಕಾರ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಲವು ದಶಕಗಳಿಂದ ಮುಂದುವರಿದಿರುವ ಅಗಸರ ಹಳ್ಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಜಕ್ಕಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರೈತರೊಂದಿಗೆ ದುರ್ವರ್ತನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಕಳೆದ ರವಿವಾರ ಸುರಿದ ಭಾರೀ ಮಳೆಯಿಂದ ಅಗಸರ ಹಳ್ಳ ತುಂಬಿ ಹರಿದ ಪರಿಣಾಮ ರೋಣ–ಜಕ್ಕಲಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ನೀರು ಸರಾಗವಾಗಿ ಹರಿಯಬೇಕಾದ ಸ್ಥಳದಲ್ಲಿ ಖಾಸಗಿ ವಿಂಡ್ ಕಂಪನಿಯವರು ತಾತ್ಕಾಲಿಕ ರಸ್ತೆ ಹಾಗೂ ಸೇತುವೆ ನಿರ್ಮಿಸಿರುವುದರಿಂದ ಮಳೆ ನೀರು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಹಲವು ಬಾರಿ ತಹಶೀಲ್ದಾರರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆಯ ನೀರು ರೈತ ಶೇಖಣ್ಣ ಮೇಟಿ ಅವರ ಜಮೀನಿಗೆ ನುಗ್ಗಿ ಬೆಳೆ ಹಾನಿಯಾಗಿದ್ದರಿಂದ ಅವರು ಸೋಮವಾರ ಸ್ವಂತ ಖರ್ಚಿನಲ್ಲಿ ಜೆಸಿಬಿ ತರಿಸಿ ಅಕ್ರಮ ರಸ್ತೆ ತೆರವುಗೊಳಿಸಿದ್ದಾರೆ. ಈ ಕ್ರಮಕ್ಕೆ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸ್ಥಳ ಪರಿಶೀಲನೆಗೆ ಬಂದ ತಹಸೀಲ್ದಾರ್ ನಾಗರಾಜ ಕೆ. ಅವರು ಸಮಸ್ಯೆ ಆಲಿಸುವ ಬದಲು ರೈತರನ್ನೇ ಗದರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮೇಲ್ಸೇತುವೆ ನಿರ್ಮಾಣ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂಬ ಅಧಿಕಾರಿಗಳ ಉತ್ತರಕ್ಕೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
 “ಅಗಸರ ಹಳ್ಳಕ್ಕೆ ಶಾಶ್ವತ ಸೇತುವೆ ನಿರ್ಮಾಣ ಮಾಡದಿದ್ದರೆ ರಸ್ತೆ ತಡೆ ಸೇರಿದಂತೆ ಉಗ್ರ ಹೋರಾಟ ಅನಿವಾರ್ಯ. ಚುನಾವಣೆ ಬಹಿಷ್ಕಾರಕ್ಕೂ ನಾವು ಸಿದ್ಧ”
ಎಂದು ಗ್ರಾಮಸ್ಥರು ಹೇಳಿದ್ದಾರೆ.
ರೈತ ಮುಖಂಡ ಸಿದ್ದಲಿಂಗೇಶ ಹಡಪದ ಮಾತನಾಡಿ, “ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ ಅವರ ಜನ್ಮಭೂಮಿಯಲ್ಲೇ ಮೂಲಭೂತ ಸೌಕರ್ಯಕ್ಕಾಗಿ ಜನ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಹಳ್ಳದಲ್ಲಿ ಹಿಂದೆ ವೃದ್ಧೆಯೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದ್ದರೂ ಆಡಳಿತ ಎಚ್ಚೆತ್ತುಕೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ರೈತ ಮುಖಂಡ ಶೇಖಣ್ಣ ಮೇಟಿ ಮಾತನಾಡಿ, “ವಿಂಡ್ ಕಂಪನಿಯ ತಾತ್ಕಾಲಿಕ ರಸ್ತೆ ನೀರಿನ ಹರಿವಿಗೆ ಅಡ್ಡಿಯಾಗಿದ್ದು ನಮ್ಮ ಜಮೀನುಗಳಿಗೆ ಹಾನಿಯಾಗಿದೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಸ್ವಂತ ಖರ್ಚಿನಲ್ಲಿ ಜೆಸಿಬಿ ತರಿಸಿ ಅಕ್ರಮ ರಸ್ತೆ ತೆರವುಗೊಳಿಸಿದ್ದೇನೆ” ಎಂದು ಹೇಳಿದರು.
 “ಅಗಸರ ಹಳ್ಳದ ಸಮಸ್ಯೆ ಇಂದು ನಿನ್ನೆಯದಲ್ಲ, ಹಲವು ವರ್ಷಗಳಿಂದ ಜನ ಜೀವಭಯದಲ್ಲಿ ಸಂಚರಿಸುತ್ತಿದ್ದಾರೆ. ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈಗಾದರೂ ಮೇಲ್ಸೇತುವೆ ನಿರ್ಮಿಸದಿದ್ದರೆ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಸೇರಿದಂತೆ ಉಗ್ರ ಹೋರಾಟಕ್ಕೆ ಮುಂದಾಗುವುದು ಖಚಿತ”
ಸಿದ್ದಲಿಂಗೇಶ ಹಡಪದ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!