HomeGadag Newsಭಾರೀ ವಾಹನಕ್ಕೆ ಬ್ರೇಕ್: ರಸ್ತೆ ಉಳಿಸಲು ರೈತರ ಪಟ್ಟು

ಭಾರೀ ವಾಹನಕ್ಕೆ ಬ್ರೇಕ್: ರಸ್ತೆ ಉಳಿಸಲು ರೈತರ ಪಟ್ಟು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಅಡಿಯಲ್ಲಿ ನಿರ್ಮಿಸಿರುವ ಗೊಜನೂರ–ಗುಂಜಳ ರಸ್ತೆಯಲ್ಲಿ ಸೈರಂತಿಕ ಪವನ ವಿದ್ಯುತ್ ಕಂಪನಿಯ ಭಾರೀ ವಾಹನಗಳ ಸಂಚಾರದಿಂದ ರಸ್ತೆ ಹಾಗೂ ಸೇತುವೆಗಳು ಹಾಳಾಗುತ್ತಿವೆ ಎಂದು ಆರೋಪಿಸಿ ರೈತರು ಗುರುವಾರ ಭಾರೀ ವಾಹನ ತಡೆದು ಪ್ರತಿಭಟನೆ ನಡೆಸಿದರು.

2020ರಲ್ಲಿ ಅಂದಿನ ಶಾಸಕ ರಾಮಣ್ಣ ಲಮಾಣಿ ಅವರ ಪ್ರಯತ್ನದಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ 5.6 ಕಿ.ಮೀ. ಉದ್ದದ ಈ ರಸ್ತೆ ಗೊಜನೂರ, ಮಾಡಳ್ಳಿ, ಯತ್ನಳ್ಳಿ ಹಾಗೂ ಗುಂಜಳ ಭಾಗದ ನೂರಾರು ಹೆಕ್ಟೇರ್ ಕೃಷಿಭೂಮಿಗೆ ಪ್ರಮುಖ ಸಂಪರ್ಕ ಕಲ್ಪಿಸುತ್ತಿದೆ.

ಕಳೆದ ಆರು ತಿಂಗಳಿನಿಂದ 60ರಿಂದ 70 ಟನ್ ತೂಕದ ಸಾಮಗ್ರಿಗಳನ್ನು ಸಾಗಿಸುವ ಭಾರೀ ವಾಹನಗಳು ಸಂಚರಿಸುತ್ತಿದ್ದು, ರಸ್ತೆ ಹಾಗೂ ಸೇತುವೆಗಳಿಗೆ ಹಾನಿಯಾಗುತ್ತಿದೆ. ಪವನ ವಿದ್ಯುತ್ ಯೋಜನೆ ಕಾಮಗಾರಿಗಾಗಿ ಸೈರಂತಿಕ ಕಂಪನಿ ಯಾವುದೇ ಅನುಮತಿ ಪಡೆಯದೇ ಈ ರಸ್ತೆ ಬಳಸುತ್ತಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಬೆಳಗ್ಗಿನಿಂದಲೇ ಕಂಪನಿಯ ಭಾರೀ ವಾಹನವನ್ನು ತಡೆದ ರೈತರು, ಇನ್ನು ಮುಂದೆ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಧನಂಜಯ ಎಂ. ರೈತರ ಅಹವಾಲು ಆಲಿಸಿ, ಕಂಪನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ ಬಳಕೆಗೆ ಅಗತ್ಯ ಅನುಮತಿ ಪಡೆದಿರುವ ಬಗ್ಗೆ ಪ್ರಶ್ನಿಸಿದ ಅವರು, ರೈತರ ಸಂಪರ್ಕ ರಸ್ತೆಗೆ ಹಾನಿಯಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸೋಮವಾರ ಕಂಪನಿಯ ಹಿರಿಯ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸಲಿದ್ದು, ಅಲ್ಲಿಯವರೆಗೆ ಹೊಸ ಭಾರೀ ವಾಹನಗಳನ್ನು ತರದಂತೆ ಕಂಪನಿ ಅಧಿಕಾರಿಗಳು ಭರವಸೆ ನೀಡಿದರು. ಆದರೆ ತಡೆಹಿಡಿದಿರುವ ವಾಹನವನ್ನು ಸಭೆ ನಡೆಯುವವರೆಗೆ ಬಿಡುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದರು.

ಬಳಿಕ ರೈತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿ, ಹಾನಿಗೊಳಗಾದ ರಸ್ತೆ ಹಾಗೂ ಸೇತುವೆಗಳನ್ನು ಕಂಪನಿಯ ವೆಚ್ಚದಲ್ಲಿಯೇ ದುರಸ್ತಿಪಡಿಸಬೇಕು ಹಾಗೂ ಭಾರೀ ವಾಹನಗಳ ಸಂಚಾರಕ್ಕೆ ಶಾಶ್ವತ ನಿಯಂತ್ರಣ ವಿಧಿಸಬೇಕು ಎಂದು ಒತ್ತಾಯಿಸಿದರು.

ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ, ಕಂದಾಯ ಅಧಿಕಾರಿ ಎಂ.ಎ. ನಧಾಪ್, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಿವರಾಜಗೌಡ ಪಾಟೀಲ, ಮಾಂತಗೌಡ ಪಾಟೀಲ, ಸಿದ್ದಲಿಂಗೇಶ ಸೊರಟೂರ, ಆರ್.ಡಿ. ಪ್ರಭಯ್ಯನಮಠ, ಹೇಮಣ್ಣ ಕರೆಣ್ಣವರ, ಪ್ರವೀಣ ಮಾಡಳ್ಳಿ, ಚಂದ್ರಗೌಡ ದೊಡ್ಡಗೌಡ್ರ, ಚನ್ನವೀರಯ್ಯ ಹಿರೇಮಠ, ಮಾಂತೇಶ ಸೊರಟೂರ, ಫಕ್ಕಿರೇಶ ಕಲ್ಲೂರ, ಹನುಮಂತಪ್ಪ ಯಳವತ್ತಿ, ಬಸಪ್ಪ ಕಪ್ಪತ್ತನವರ, ಚನ್ನಪ್ಪ ಷಣ್ಮುಕಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

“ರೈತರ ಸಂಪರ್ಕ ರಸ್ತೆಗೆ ಯಾವುದೇ ಹಾನಿಯಾಗಲು ಅವಕಾಶ ನೀಡುವುದಿಲ್ಲ. ಅಗತ್ಯ ಅನುಮತಿ ಇಲ್ಲದೆ ರಸ್ತೆ ಬಳಕೆ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.”

– ಧನಂಜಯ ಎಂ., ತಹಸೀಲ್ದಾರ್

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img