ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ದೀಪಗಳ ಹಬ್ಬ ದೀಪಾವಳಿಗೆ ನರೇಗಲ್ಲ ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿತ್ತು. ದೀಪಾವಳಿಯನ್ನು ಹಬ್ಬಗಳ ರಾಜ ಎಂದು ಕರೆಯಲಾಗುತ್ತದೆ. ಇಂದು ಅನೇಕರು ಈ ಹಬ್ಬವನ್ನು ನರಕ ಚತುರ್ದಶಿಯೆಂದು ಆಚರಿಸಿದರೆ ಮತ್ತೆ ಕೆಲವರು ಈ ಹಬ್ಬವನ್ನು ಹಿರಿಯರ ಹಬ್ಬವೆಂದು ಆಚರಿಸುತ್ತಾರೆ.

ನರಕಾಸುರ ಎಂಬ ಅಸುರನನ್ನು ಶ್ರೀಕೃಷ್ಣನು ಸಂಹಾರ ಮಾಡಿ ಬಂದ ನಿಮಿತ್ತ ಈ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತಿದೆ. ಮನೆ, ಮನೆಗಳಲ್ಲಿ ನಸುಕಿನ ಜಾವದಲ್ಲಿ ಮನೆಯ ಗಂಡಸರಿಗೆ ಆರುತಿ ಮಾಡಿ ಮಹಿಳೆಯರು ಸಂಭ್ರಮ ಪಡುತ್ತಾರೆ. ಇನ್ನು ಕೆಲವರು ಹಿರಿಯರನ್ನು ನೆನೆಯುವ ಹಬ್ಬವೆಂದು ಹಿರಿಯರ ಹಬ್ಬವನ್ನಾಗಿ ಆಚರಿಸುತ್ತಾರೆ. ಈ ಹಬ್ಬಗಳಿಗೆ ಬೇಕಾಗುವ ಹೂವು, ಹಣ್ಣು, ಕಾಯಿ, ಆಕಾಶ ಬುಟ್ಟಿ ಮುಂತಾದ ವಸ್ತುಗಳೊಂದಿಗೆ ಬಾಳೆ ದಿಂಡುಗಳು, ಚಂಡು ಹೂಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು. ಇವುಗಳ ಖರೀದಿಯಲ್ಲಿ ಜನ ತೊಡಗಿರುವುದು ಕಂಡು ಬಂದಿತು. ಈ ಸಾರೆ ಮಳೆ ಕೂಡ ಹೆಚ್ಚಾಗಿ ಸುರಿದ್ದರಿಂದ ರೈತರು ಬೆಳೆದಿದ್ದ ಚಂಡು ಹೂವು ನಿರೀಕ್ಷಿತ ಪ್ರಮಾಣದಲ್ಲಿ ರೈತರ ಕೈಗೆ ಬಾರದೆ, ಮಾರುಕಟ್ಟೆಗೂ ಆವಕ ಕುಂಠಿತವಾಗಿದ್ದರಿಂದ ಈ ಸಾರೆ ಚಂಡು ಹೂವಿನ ಬೆಲೆ ಸ್ವಲ್ಪ ಹೆಚ್ಚಾಗಿತ್ತು.
ಕಳೆದ ದೀಪಾವಳಿ ಹಬ್ಬಕ್ಕೆ ಹೋಲಿಸಿದರೆ ಈ ಸಾರೆ ಎಲ್ಲವೂ ತುಟ್ಟಿಯಾಗಿವೆ ಎಂಬ ಭಾವನೆ ಎಲ್ಲರಲ್ಲಿಯೂ ಇತ್ತು. ಹಾಗೆಂದು ಹಬ್ಬವನ್ನು ಬಿಡುವಂತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಜನತೆ ಖರೀದಿಗೆಂದು ಮಾರುಕಟ್ಟೆಗೆ ಬಂದಿದ್ದರು. ಕೆಲವರು ಅಮವಾಸ್ಯೆಯಂದು ಶ್ರೀಲಕ್ಷ್ಮಿ ಪೂಜೆಯನ್ನು ಮಾಡಿದರೆ, ಇನ್ನು ಕೆಲವರು ಪಾಡ್ಯಮಿಯಂದು ಶ್ರೀಲಕ್ಷಿö್ಮಯ ಪೂಜೆ ಮಾಡುತ್ತಾರೆ. ನರಕ ಚತುರ್ದಶಿಯ ದಿನ ಸಂಜೆ ಅಮವಾಸ್ಯೆ ಬಂದಿರುವದರಿಂದ ಕೆಲವರು ಗುರುವಾರವೇ ಶ್ರೀಲಕ್ಷಿö್ಮಯ ಪೂಜೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿತು.
ನಮ್ಮ ಸಂಪ್ರದಾಯಗಳನ್ನು ನಾವು ಬಿಡುವಂತಿಲ್ಲ. ಹಿರಿಯರು ಮಾಡಿಕೊಂಡು ಬಂದ ನೇಮಗಳನ್ನು ನಾವು ಪಾಲಿಸಿಕೊಂಡು, ಅದನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಿಕೊಂಡು ಹೋಗಲೇಬೇಕಿದೆ. ಅದಕ್ಕಾಗಿ ತುಟ್ಟಿ ಎಂಬ ಮಾತನ್ನು ಬದಿಗಿಟ್ಟು ವಸ್ತುಗಳನ್ನು ಖರೀದಿ ಮಾಡುತ್ತಿದ್ದೇವೆ. ವಸ್ತುಗಳು ಏನೇ ತುಟ್ಟಿಯಾದರೂ ಹಬ್ಬ ಆಚರಿಸಿದಾಗ ಸಿಗುವ ಆನಂದದ ಮುಂದೆ ಅದೆಲ್ಲವೂ ಗೌಣ ಎನಿಸುತ್ತದೆ.
– ಚನ್ನಬಸಪ್ಪ ಕುಷ್ಟಗಿ.
ರೈತರು.



