ಕೊಡಗು/ಮಡಿಕೇರಿ: ದಕ್ಷಿಣ ಭಾರತದ ಜೀವನದಿ ತಾಯಿ ಕಾವೇರಿಯ ತೀರ್ಥೋದ್ಭವ (Cauvery Theerthodbhava) ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪುಣ್ಯ ಕಾಲದ ಮುಹೂರ್ತ ನಿಗದಿಯಾಗಿದೆ. ಮಡಿಕೇರಿ ತಾಲೂಕಿನ ಜನ್ಮಭೂಮಿ ತಲಕಾವೇರಿ ಕ್ಷೇತ್ರದಲ್ಲಿ ಅಕ್ಟೋಬರ್ 17ರ ರಾತ್ರಿ 7:50ಕ್ಕೆ ಕಾವೇರಿ ತೀರ್ಥೋದ್ಭವ ನಡೆಯಲಿದೆ ಎಂದು ಪ್ರಕಟಿಸಲಾಗಿದೆ.
ಮೇಷ ಲಗ್ನದಲ್ಲಿ ತೀರ್ಥೋದ್ಭವ: ಈ ಬಾರಿ ಅತ್ಯಂತ ಶುಭಪ್ರದವಾದ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ಜರುಗಲಿದೆ. ಪವಿತ್ರ ತೀರ್ಥ ರೂಪಿಣಿಯಾಗಿ ತಾಯಿ ಕಾವೇರಿ ಪ್ರತ್ಯಕ್ಷಳಾಗುವ ಈ ದಿವ್ಯ ಕ್ಷಣವನ್ನು ಕಣ್ಣುಂಬಿಕೊಳ್ಳಲು ಹಾಗೂ ಪವಿತ್ರ ತೀರ್ಥ ಪ್ರೋಕ್ಷಣೆ ಪಡೆದುಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ತಲಕಾವೇರಿಯಲ್ಲಿ ಧಾರ್ಮಿಕ ವಿಧಿವಿಧಾನಗಳಿಗೆ ಹಾಗೂ ಭಕ್ತರ ಅನುಕೂಲಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ಸರ್ಕಾರದಿಂದ 2 ಕೋಟಿ ರೂಪಾಯಿ ಅನುದಾನ: ಕೊಡಗಿನ ಅಧಿದೇವತೆ ಕಾವೇರಿ ತೀರ್ಥೋದ್ಭವ ಸಂಭ್ರಮಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ರಾಜ್ಯ ಸರ್ಕಾರ ಸಾಥ್ ನೀಡಿದೆ. ಅಕ್ಟೋಬರ್ 17ರಂದು ನಡೆಯಲಿರುವ ಈ ಪವಿತ್ರ ಕಾವೇರಿ ತೀರ್ಥೋದ್ಭವ ಆಚರಣೆ ಹಾಗೂ ಸಿದ್ಧತೆಗಳಿಗಾಗಿ ಬರೋಬ್ಬರಿ 2 ಕೋಟಿ ರೂಪಾಯಿ ಅನುದಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ತೀರ್ಥೋದ್ಭವದ ಹಿನ್ನೆಲೆಯಲ್ಲಿ ಇಡೀ ಕೊಡಗು ಜಿಲ್ಲೆಯಾದ್ಯಂತ ಧಾರ್ಮಿಕ ಸಂಭ್ರಮಾಚರಣೆಯ ವಾತಾವರಣ ನೆಲೆಸಿದೆ.



