ನವದೆಹಲಿ:- ಕಬ್ಬು ಬೆಳೆಗಾರರ ವಿಷಯದಲ್ಲಿ ಕೇಂದ್ರದ ಮೇಲೆ ಸಿಎಂ ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ಸಚಿವ ಪ್ರಹ್ಲಾದ್ ಜೋಶಿ ಅವರು ದಾಖಲೆಗಳ ಸಮೇತ ಉತ್ತರ ನೀಡಿದ್ದಾರೆ.
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಹಿತವನ್ನು ಕಡೆಗಣಿಸುತ್ತಿದೆ ಎಂಬ ಸಿದ್ದು ಆರೋಪಕ್ಕೆ ಸಚಿವ ಪ್ರಹ್ಲಾದ್ ಜೋಶಿ ಅವರು, ಸಿಎಂ ಗೆ ಪತ್ರ ಬರೆದು ಟಾಂಗ್ ಕೊಟ್ಟಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದತ್ತ ಬೆರಳು ತೋರಿಸುತ್ತಾ, ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ
ಮೋದಿ ಸರ್ಕಾರದ ಅವಧಿಯಲ್ಲಿ ಕಬ್ಬಿನ ಫೇರ್ ಅಂಡ್ ರಿಮ್ಯುನರೇಟಿವ್ ಪ್ರೈಸ್ (FRP) ಸ್ಥಿರವಾಗಿ ಹೆಚ್ಚಾಗಿದೆ. 2013-14 ರಲ್ಲಿ ಕ್ವಿಂಟಲ್‌ಗೆ 210 ರೂ. ಇದ್ದ ಎಫ್ಆರ್ಪಿ 2025-26 ರ ಸಕ್ಕರೆ ಋತುವಿನಲ್ಲಿ ಕ್ವಿಂಟಲ್‌ಗೆ 355 ರೂ.ಗೆ ಹೆಚ್ಚಳವಾಗಿದೆ. ಇದು ಎಫ್ಆರ್ಪಿ ದರದ ಬಲವಾದ ಏರಿಕೆಯ ಪ್ರವೃತ್ತಿಯನ್ನು ಪ್ರತಿಬಿಂಬಿಸಿದೆ. ಎಫ್ಆರ್ಪಿಯು ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಶೇ 105 ರಿಂದ 112 ರಷ್ಟು ಲಾಭವನ್ನು ಒದಗಿಸುತ್ತದೆ, ಇದು ಲಾಭದಾಯಕತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುತ್ತದೆ ಎಂದು ಜೋಶಿ ಉಲ್ಲೇಖಿಸಿದ್ದಾರೆ.
1966 ರ ಕಬ್ಬು (ನಿಯಂತ್ರಣ) ಆದೇಶದ ಪ್ರಕಾರ, ಸಕ್ಕರೆ ಕಾರ್ಖಾನೆಗಳು ಕಬ್ಬು ಖರೀದಿಸಿದ 14 ದಿನಗಳ ಒಳಗೆ ರೈತರಿಗೆ ಹಣ ಪಾವತಿಸಬೇಕು. ಇದನ್ನು ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳದ್ದು ಎಂದು ಜೋಶಿ ಹೇಳಿದ್ದಾರೆ.
ಕಬ್ಬು ಬೆಳೆಗಾರರ ಹಿತಕ್ಕಾಗಿ ಕೇಂದ್ರ ಕೈಗೊಂಡ ಕ್ರಮಗಳೇನು?
2014-15ರಿಂದ 2020-21ರ ಅವಧಿಯಲ್ಲಿ 16,500 ಕೋಟಿ ರೂ. ಹಣವನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡಲಾಗಿದೆ. ಇದರಿಂದ ರೈತರ ಬಾಕಿ ಪಾವತಿಗೆ ಸಹಾಯವಾಗಿದೆ.
ಹೆಚ್ಚುವರಿ ಸಕ್ಕರೆ ಉತ್ಪಾದನೆಯ ಸಮಸ್ಯೆ ನಿಭಾಯಿಸಲು, ಕಾರ್ಖಾನೆಗಳು ಹೆಚ್ಚುವರಿ ಕಬ್ಬನ್ನು ಎಥೆನಾಲ್ ತಯಾರಿಕೆಗೆ ಬಳಸಲು ಪ್ರೋತ್ಸಾಹ ನೀಡಲಾಗಿದೆ. ಕರ್ನಾಟಕದಲ್ಲಿ ಎಥೆನಾಲ್ ಹಂಚಿಕೆ 2022-23ರಲ್ಲಿ 85 ಕೋಟಿ ಲೀಟರ್ ಇಂದ 2025-26ಕ್ಕೆ 133 ಕೋಟಿ ಲೀಟರ್ಗೆ ಹೆಚ್ಚಿಸಲಾಗಿದೆ. ಈ ಉದ್ದೇಶಕ್ಕಾಗಿ 435.42 ಕೋಟಿ ರೂ. ಹಣವನ್ನು ಎಥೆನಾಲ್ ಇಂಟರೆಸ್ಟ್ ಸಬ್ವೆನ್ಶನ್ ಯೋಜನೆ ಅಡಿಯಲ್ಲಿ ಕರ್ನಾಟಕಕ್ಕೆ ಮಂಜೂರಾಗಿದೆ.
ಎಕ್ಸ್-ಮಿಲ್ ಬೆಲೆ ಇಳಿಮುಖವಾಗಿದ್ದಾಗ ಕೇಂದ್ರ ಸರ್ಕಾರವು 10 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು ಮಾಡಲು ಅನುಮತಿ ನೀಡಿತ್ತು. ಇದರಿಂದ ಕರ್ನಾಟಕದಲ್ಲಿ ಎಕ್ಸ್-ಮಿಲ್ ಬೆಲೆ ಪ್ರತಿ ಕ್ವಿಂಟಲ್‌ಗೆ 3,370 ರಿಂದ 3,930 ರೂ. ಏರಿಕೆಯಾಗಿದೆ.
ಕೇಂದ್ರದ ಈ ಕ್ರಮಗಳಿಂದ ಕರ್ನಾಟಕ ಸೇರಿ ದೇಶದಾದ್ಯಂತ ಕಬ್ಬಿನ ಬಾಕಿ ಪಾವತಿ ಸ್ಥಿತಿ ಬಹಳ ಸುಧಾರಿಸಿದೆ. 2022-23 ಮತ್ತು 2023-24 ಹಂಗಾಮಿಗೆ ಯಾವುದೇ ಬಾಕಿ ಇಲ್ಲ. 2024-25 ಹಂಗಾಮಿಗೆ ಕೇವಲ 50 ಲಕ್ಷ ರೂ. ಬಾಕಿ ಇದೆ (2025 ಸೆಪ್ಟೆಂಬರ್ 30ರವರೆಗೆ) ಎಂದು ಜೋಶಿ ಪತ್ರದಲ್ಲಿ ತಿಳಿಸಿದ್ದಾರೆ.


