ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 34ನೇ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಭರ್ಜರಿ ಶತಕ ಸಿಡಿಸಿದ್ದಾರೆ.
ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸುದರ್ಶನ್, ಆರ್ಸಿಬಿ ವೇಗದ ಬೌಲರ್ಗಳಾದ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹೇಜಲ್ವುಡ್ ವಿರುದ್ಧ ಸಿಡಿಲಿನ ಬ್ಯಾಟಿಂಗ್ ನಡೆಸಿದರು. ಪವರ್ಪ್ಲೇಯಲ್ಲೇ ವೇಗವಾಗಿ ರನ್ ಕಲೆಹಾಕಿದ ಅವರು ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ನಂತರ ನಾಯಕ ಶುಭಮನ್ ಗಿಲ್ ಜೊತೆಗೆ ಉತ್ತಮ ಜೊತೆಯಾಟ ಕಟ್ಟಿದ ಸುದರ್ಶನ್, ತಂಡವನ್ನು ಭದ್ರ ಸ್ಥಿತಿಗೆ ಕೊಂಡೊಯ್ದರು. 57 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದ ಅವರು, ಅಂತಿಮವಾಗಿ 58 ರನ್ಗಳಲ್ಲಿ 100 ರನ್ ಮಾಡಿ ಹೇಜಲ್ವುಡ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಈ ಶತಕದೊಂದಿಗೆ ಸಾಯಿ ಸುದರ್ಶನ್ ಐಪಿಎಲ್ನಲ್ಲಿ ತಮ್ಮ ಮೂರನೇ ಶತಕ ದಾಖಲಿಸಿದ್ದಾರೆ. ಅವರು ಈ ಹಿಂದೆ 2024 ಹಾಗೂ 2025 ಆವೃತ್ತಿಗಳಲ್ಲಿಯೂ ತಲಾ ಒಂದು ಶತಕ ಬಾರಿಸಿದ್ದರು.
ಇದೇ ವೇಳೆ ಸುದರ್ಶನ್ ಐಪಿಎಲ್ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್ಗಳಲ್ಲಿ 2000 ರನ್ ಪೂರೈಸಿದ ದಾಖಲೆ ನಿರ್ಮಿಸಿದ್ದಾರೆ. ಕೇವಲ 47 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿ, ಕ್ರಿಸ್ ಗೇಲ್ ಅವರ ಹಿಂದಿನ ದಾಖಲೆ ಮುರಿದಿದ್ದಾರೆ.
ಸುದರ್ಶನ್ ಅವರ ಈ ಇನ್ನಿಂಗ್ಸ್ಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಪರ ಅಬ್ಬರದ ಬ್ಯಾಟಿಂಗ್ ಕಾಣಿಸಿಕೊಂಡಿದೆ.



