ಚಾಮರಾಜನಗರ: ಸರ್ಕಾರಿ ವೈದ್ಯರ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಶೆಟ್ಟಹಳ್ಳಿ ಗ್ರಾಮದ ಶೋಭಾ ಹಾಗೂ ಹಂಗಳ ಗ್ರಾಮದ ಆನಂದ್ ಎಂಬುವವರಿಗೆ ಸೇರಿದ ಮಗುವಾಗಿದ್ದು, ಮಗುವಿಗೆ ಆರು ತಿಂಗಳಾದ ಕಾರಣ ಕಿವಿ ಚುಚ್ಚಿಸಲು ಶೋಭ ತಾಯಿ ಜೊತೆ ಬೊಮ್ಮಲಾಪುರ ಸರ್ಕಾರಿ ಅಸ್ಪತ್ರೆಗೆ ತೆರಳಿದ್ದಾರೆ.
ಈ ವೇಳೆಯಲ್ಲಿ ವೈದ್ಯ ನಾಗರಾಜು ಮಗುವಿನ ಎರಡು ಕಿವಿಗೆ ಅನಸ್ತೇಸಿಯಾ ಚುಚ್ಚುಮದ್ದು ನೀಡಿದ್ದಾರೆ. ಈ ವೇಳೆ ಮಗು ಏಕಾಏಕಿ ಬಾಯಲ್ಲಿ ನೊರೆ ತುಂಬಿಕೊಂಡು ವಾಂತಿ ಮಾಡಿದೆ. ಈ ವೇಳೆ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಗು ಮೃತಪಟ್ಟಿದೆ. ವಿಚಾರ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ಇನ್ನೂ ಮಗುವನ್ನು ವೈದ್ಯ ನಾಗರಾಜು ಕೊಂದಿದ್ದಾರೆ ಇನ್ಯಾರಿಗೂ ಇಂತಹ ನೋವು ಬರಬಾರದು ಇಂತಹ ಘಟನೆ ಮರುಕಳಿಸಬಾರದು ಕೂಡಲೆ ವೈದ್ಯ ನಾಗರಾಜುರನ್ನು ಅಮಾನತ್ತು ಆಗಬೇಕು, ಅತನ ವಿರುದ್ದ ಕ್ರಮವಾಗಬೇಕು ಯಾಕೆ ಮಗು ಬಲಿ ಪಡೆದೆ ಎಂದು ಕೇಳುತ್ತೇವೆ ಅವನನ್ನು ಕರೆಸಿ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದರು.