ಚಾಮರಾಜನಗರ:- ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೇಪಾಪುರ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಕೊಟ್ಟಿಗೆಯಲ್ಲಿದ್ದ ಹಸುವನ್ನು ಬಲಿ ಪಡೆದ ಘಟನೆ ನಡೆದಿದೆ.
ಗ್ರಾಮದ ಸಿದ್ದರಾಜು ಅವರಿಗೆ ಸೇರಿದ ಹಸುವೇ ಚಿರತೆ ದಾಳಿಗೆ ಬಲಿಯಾಗಿದ್ದು, ಘಟನೆ ಬಳಿಕ ಗ್ರಾಮದಲ್ಲಿ ಭೀತಿ ಆವರಿಸಿದೆ. ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಹಾಗೂ ಹುಲಿ ಕಾಟ ಹೆಚ್ಚಾಗಿದ್ದು, ಸುಮಾರು 15 ದಿನಗಳ ಹಿಂದಷ್ಟೇ ಹುಲಿ ಬೋನಿಗೆ ಬಿದ್ದಿತ್ತು. ಇದೀಗ ಮತ್ತೆ ಚಿರತೆ ದಾಳಿ ನಡೆದಿರುವುದರಿಂದ ರೈತರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹಸು ಕಳೆದುಕೊಂಡ ರೈತನಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಹಾಗೂ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.



