ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಫುಟ್ಬಾಲ್ ತಾರೆ ಲಿಯೋನಲ್ ಮೆಸ್ಸಿ ಕಾರ್ಯಕ್ರಮದಲ್ಲಿ ದೊಡ್ಡ ದಾಂಧಲೆ ನಡೆದಿದೆ. ನೆಚ್ಚಿನ ಆಟಗಾರನ ನೋಡಲು ಅವಕಾಶ ಸಿಗದಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದು, ದೊಡ್ಡ ಗಲಾಟೆ ಮಾಡಿದ್ದಾರೆ. ಇನ್ನೂ ಈ ಸಂಬಂಧ ಸಿಎಂ ಮಮತಾ ಬ್ಯಾನರ್ಜಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ, ಇಂದು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಘಟನೆಯಿಂದ ನಾನು ತೀವ್ರವಾಗಿ ವಿಚಲಿತಳಾಗಿದ್ದೇನೆ ಮತ್ತು ಆಘಾತಕ್ಕೊಳಗಾಗಿದ್ದೇನೆ. ತಮ್ಮ ನೆಚ್ಚಿನ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ನೋಡಲು ನೆರೆದಿದ್ದ ಸಾವಿರಾರು ಕ್ರೀಡಾ ಪ್ರೇಮಿಗಳು ಮತ್ತು ಅಭಿಮಾನಿಗಳೊಂದಿಗೆ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ರೀಡಾಂಗಣಕ್ಕೆ ಹೋಗುತ್ತಿದ್ದೆ ಎಂದು ಬರೆದಿದ್ದಾರೆ.
ಇಂದು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವ್ಯವಸ್ಥೆ ಉಂಟಾದ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲಿಯೋನೆಲ್ ಮೆಸ್ಸಿ ಮತ್ತು ಅಭಿಮಾನಿಗಳಿಗೆ ಕ್ಷಮೆ ಯಾಚಿಸಿದ್ದಾರೆ. ಅರ್ಜೆಂಟೀನಾ ವಿಶ್ವಕಪ್ ವಿಜೇತ ನಾಯಕ ಮೆಸ್ಸಿ ಇಂದು ಮಧ್ಯಾಹ್ನ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅವರನ್ನು ನೋಡಲು ಉತ್ಸುಕರಾಗಿದ್ದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.
ಆದರೆ, ಹೆಚ್ಚಿನ ಟಿಕೆಟ್ ಬೆಲೆಗಳನ್ನು ಪಾವತಿಸಿದರೂ ಅನೇಕ ಅಭಿಮಾನಿಗಳಿಗೆ ಮೆಸ್ಸಿಯನ್ನು ನೋಡಲು ಸಾಧ್ಯವಾಗಲಿಲ್ಲ. ಮಂತ್ರಿಗಳು, ಕ್ಲಬ್ ಅಧಿಕಾರಿಗಳು, ಮಾಜಿ ಫುಟ್ಬಾಲ್ ಆಟಗಾರರು, ಮಾಧ್ಯಮ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಮೆಸ್ಸಿಯ ಸುತ್ತಲೂ ಜನರು ಮುತ್ತಿಕೊಂಡಿದ್ದರು. ಇದರಿಂದ ಕ್ರೀಡಾಂಗಣದ ಸೀಟ್ಗಳಲ್ಲಿ ಕುಳಿತಿದ್ದವರಿಗೆ ಮೆಸ್ಸಿಯನ್ನು ನೋಡಲು ಸಾಧ್ಯವಾಗಲೇ ಇಲ್ಲ.
ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಹೆಚ್ಚು ಬೆಲೆ ತೆತ್ತು ಟಿಕೆಟ್ ಖರೀದಿಸಿದ್ದರೂ ಆತನನ್ನು ನೋಡಲು ಸಾಧ್ಯವಾಗದೆ ಹತಾಶೆಗೊಂಡ ಅಭಿಮಾನಿಗಳು ಗಲಾಟೆಯೆಬ್ಬಿಸಿದರು. ಇದರಿಂದ ಮೆಸ್ಸಿ ಬೇಗನೆ ಮೈದಾನದಿಂದ ಹೊರಗೆ ಹೋದರು. ಇದರಿಂದ ಮೆಸ್ಸಿಯ ಅಭಿಮಾನಿಗಳು ಇನ್ನಷ್ಟು ಕೆರಳಿ ಮುರಿದ ಕುರ್ಚಿಗಳು, ಬಾಟಲಿಗಳನ್ನು ಎಸೆದು ಕ್ರೀಡಾಂಗಣದಲ್ಲಿ ದಾಂಧಲೆ ಎಬ್ಬಿಸಿದರು. ಇದರಿಂದ ಪರಿಸ್ಥಿತಿ ಹದಗೆಟ್ಟು, ಕ್ರೀಡಾಂಗಣದೊಳಗೆ ಆತಂಕದ ವಾತಾವರಣ ಸೃಷ್ಟಿಯಾಯಿತು.
ಈ ಘಟನೆಗೆ ಪ್ರತಿಕ್ರಿಯೆಯಾಗಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆದ ವಿಷಾದ ವ್ಯಕ್ತಪಡಿಸಿದ್ದಾರೆ. ಮೆಸ್ಸಿ ಮತ್ತು ಮೆಸ್ಸಿಯ ಅಭಿಮಾನಿಗಳಿಗೆ ಸಿಎಂ ಕ್ಷಮೆ ಯಾಚಿಸಿದ್ದಾರೆ. ಕಳಪೆ ಕಾರ್ಯಕ್ರಮ ನಿರ್ವಹಣೆಯೇ ಅವ್ಯವಸ್ಥೆಗೆ ಕಾರಣವೆಂದು ಅವರು ಹೇಳಿದ್ದಾರೆ. ಕ್ರೀಡಾಂಗಣದ ವ್ಯವಸ್ಥೆಗಳನ್ನು ಪರಿಶೀಲಿಸಲು ಮತ್ತು ಲೋಪಗಳನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುವುದು ಎಂದು ಅವರು ಘೋಷಿಸಿದ್ದಾರೆ.



