ಉಡುಪಿ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಶುಕ್ರವಾರ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆಯಲಿದ್ದಾರೆ. ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಬಳಿಕ ಅವರು ಮೊದಲ ಬಾರಿಗೆ ಪ್ರಸಿದ್ಧ ಶಕ್ತಿಪೀಠಕ್ಕೆ ಆಗಮಿಸುತ್ತಿರುವುದು ಗಮನ ಸೆಳೆದಿದೆ.
ಶುಕ್ರವಾರ ಮಧ್ಯಾಹ್ನ ಕೊಲ್ಲೂರಿಗೆ ಆಗಮಿಸಲಿರುವ ವಿಜಯ್, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೂಕಾಂಬಿಕೆ ದೇವಿಯ ದರ್ಶನ ಪಡೆಯಲಿದ್ದಾರೆ. ಬಳಿಕ ಸಂಜೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ತೆರಳಲಿದ್ದಾರೆ.
ಕೊಲ್ಲೂರು ಕ್ಷೇತ್ರವು ದಕ್ಷಿಣ ಭಾರತದ ರಾಜಕೀಯ ನಾಯಕರಿಗೆ ವಿಶೇಷ ಭಕ್ತಿ ಕೇಂದ್ರವಾಗಿದೆ. ಎಂಜಿಆರ್‌ನಿಂದ ಹಿಡಿದು ಜಯಲಲಿತಾ ತನಕ ಹಲವು ತಮಿಳುನಾಡು ನಾಯಕರು ಇಲ್ಲಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. 2004ರಲ್ಲಿ ಜಯಲಲಿತಾ ಚಂಡಿಕಾಯಾಗ ನಡೆಸಿ ಅನ್ನಸಂತರ್ಪಣೆಗೆ ದೇಣಿಗೆಯನ್ನೂ ನೀಡಿದ್ದರು.
ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಕ್ಷೇತ್ರವು ಪರಶುರಾಮ ಸೃಷ್ಟಿಯ ಏಳು ಮುಕ್ತಿ ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಆದಿ ಶಂಕರಾಚಾರ್ಯರು ಪ್ರತಿಷ್ಠಾಪನೆ ಮಾಡಿದ ಈ ಶಕ್ತಿಪೀಠದಲ್ಲಿ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯ ಐಕ್ಯಸ್ವರೂಪವಾಗಿ ಮೂಕಾಂಬಿಕೆಯನ್ನು ಆರಾಧಿಸಲಾಗುತ್ತದೆ. ದೇವಿಯ ದರ್ಶನದಿಂದ ಯಶಸ್ಸು ಮತ್ತು ಏಳಿಗೆ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.



