ಬೆಂಗಳೂರು:- ಸಿಎಂ ರಾಜೀನಾಮೆ ದಿನ ದೂರವಿಲ್ಲ, ಶೀಘ್ರವೇ ಬರಲಿದೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಹಿಂದಿನ ಆಯುಕ್ತ ದಿನೇಶ್ಕುಮಾರ್ ಅಮಾನತಾಗಿರುವುದರಿಂದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪರಿಸ್ಥಿತಿ ಬಂದೇ ಬರುತ್ತದೆ ಎಂದರು.
ಮುಡಾ ಆಯುಕ್ತರನ್ನು ಯಾವ ಕಾರಣಕ್ಕಾಗಿ ಅಮಾನತು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಒಬ್ಬ ಆಯುಕ್ತರೇ ಅಮಾನತುಗೊಂಡಿರುವುದರಿಂದ ಅಲ್ಲಿಗೆ ಹಗರಣ ನಡೆದಿದೆ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ ಎಂದು ಹೇಳಿದರು. ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲವೆಂದು ಸಿದ್ದರಾಮಯ್ಯನವರು ಹೇಳುತ್ತಿದ್ದರು.
ದಿನೇಶ್ಕುಮಾರ ಯಾವ ಕಾರಣಕ್ಕಾಗಿ ಅಮಾನತುಪಡಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ಬರುವ ದಿನಗಳಲ್ಲಿ ಸಿಎಂ ರಾಜೀನಾಮೆ ನೀಡುವುದು ಶತ ಸಿದ್ಧ, ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು.
ಕಾಂಗ್ರೆಸ್ನವರು ಬಿಜೆಪಿ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಬಿಜೆಪಿ ಮನೆಯೊಂದು, ಮೂರು ಬಾಗಿಲು ಎನ್ನುವವರು ಮುಡಾ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಬಂದ ಮೇಲೆ ಎಷ್ಟು ಬಾಗಿಲುಗಳು ಇರುತ್ತವೆ ಎಂದು ಕಾದು ನೋಡಿ ಎಂದು ತಿರುಗೇಟು ನೀಡಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ವಿಚಾರವಾಗಿ ನಮ ಪಕ್ಷದ ಮುಖಂಡರು ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಯೋಗೀಶ್ವರ್ ಅಭ್ಯರ್ಥಿಯಾಗಬೇಕೆಂಬುದು ಬಹುತೇಕರ ಒತ್ತಾಸೆಯಾಗಿದೆ. ಅಂತಿಮವಾಗಿ ಪಕ್ಷ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಕಾದು ನೋಡೋಣ ಎಂದರು.
ನಾವು ಈ ಹಿಂದೆಯೇ ಕೆಪಿಎಸ್ಸಿ ಪರೀಕ್ಷೆಯನ್ನು ಮುಂದೂಡಬೇಕೆಂದು ಹಲವಾರು ಬಾರಿ ಮನವಿ ಮಾಡಿಕೊಂಡರೂ ಸರ್ಕಾರ ನಮ ಮಾತು ಕೇಳಲಿಲ್ಲ. ಯಾರೋ ಒಬ್ಬ ಅಯೋಗ್ಯ ಮಾಡಿದ ತಪ್ಪಿಗೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದೆ. ಇದಕ್ಕೆ ಕಾರಣರಾದವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.