ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಐ-ಪಿಎಸಿ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ನಿರ್ದೇಶಕ ವಿನೇಶ್ ಚಾಂಡೆಲ್ ಅವರಿಗೆ ನವದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಚಾಂಡೆಲ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ (ಇಡಿ) ವಿರೋಧ ವ್ಯಕ್ತಪಡಿಸದ ಹಿನ್ನೆಲೆ ನ್ಯಾಯಾಲಯ ಈ ಮಹತ್ವದ ಆದೇಶ ಹೊರಡಿಸಿದೆ. ತನಿಖಾ ಪ್ರಕ್ರಿಯೆಗೂ ಚಾಂಡೆಲ್ ಇದುವರೆಗೆ ಸಂಪೂರ್ಣ ಸಹಕಾರ ನೀಡಿರುವುದನ್ನು ನ್ಯಾಯಾಲಯ ಪರಿಗಣಿಸಿದ್ದು, ಅಗತ್ಯವಿದ್ದಾಗಲೆಲ್ಲಾ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ. ಈ ಕಾರಣದಿಂದ ಜಾಮೀನು ನಿರಾಕರಿಸಲು ಯಾವುದೇ ಬಲವಾದ ಆಧಾರಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಜಾಮೀನು ಅರ್ಜಿಯಲ್ಲಿ ತಮ್ಮ ತಾಯಿ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮಾನವೀಯ ಆಧಾರದ ಮೇಲೆ ಮಧ್ಯಂತರ ಪರಿಹಾರ ನೀಡುವಂತೆ ಚಾಂಡೆಲ್ ಮನವಿ ಮಾಡಿದ್ದರು.
ಆದರೆ ಜಾಮೀನು ನೀಡುವ ವೇಳೆ ನ್ಯಾಯಾಲಯ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ತಿರುಚಬಾರದು, ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವಂತಿಲ್ಲ, ತನಿಖೆಗೆ ಮುಂದುವರಿದು ಸಂಪೂರ್ಣ ಸಹಕರಿಸಬೇಕು ಹಾಗೂ ಅಗತ್ಯವಿದ್ದಾಗ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಸೂಚಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು, ಏಪ್ರಿಲ್ 13ರಂದು ಚಾಂಡೆಲ್ ಅವರನ್ನು ಬಂಧಿಸಲಾಗಿತ್ತು.
ಪ್ರಕರಣದ ಹಿನ್ನೆಲೆ:
ಪಶ್ಚಿಮ ಬಂಗಾಳದ ಅಸನ್ಸೋಲ್ ಸುತ್ತಮುತ್ತಲಿನ ಕುನುಸ್ಟೋರಿಯಾ ಮತ್ತು ಕಜೋರಾ ಪ್ರದೇಶಗಳ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಗಣಿಗಳಿಗೆ ಸಂಬಂಧಿಸಿದ ಬಹುಕೋಟಿ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) 2020ರ ನವೆಂಬರ್‌ನಲ್ಲಿ ಎಫ್‌ಐಆರ್ ದಾಖಲಿಸಿತ್ತು. ಇದೇ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿತ್ತು.
ತನಿಖೆ ವೇಳೆ ಕಲ್ಲಿದ್ದಲು ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಹವಾಲಾ ನಿರ್ವಾಹಕನೊಬ್ಬ, ಐ-ಪಿಎಸಿ ನೋಂದಾಯಿತ ಘಟಕವಾದ ‘ಇಂಡಿಯನ್ ಪಿಎಸಿ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್’ಗೆ ಹತ್ತಾರು ಕೋಟಿ ರೂಪಾಯಿ ವರ್ಗಾವಣೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಅಕ್ರಮ ಹಣ ವರ್ಗಾವಣೆ ಜಾಲದಲ್ಲಿ ಐ-ಪಿಎಸಿಗೂ ಸಂಪರ್ಕವಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.



