HomeGadag Newsಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸಲು ಮುಂದೆ ಬನ್ನಿ: ಲಯನ್ಸ್ ಕ್ಲಬ್‌ನ ಅಧ್ಯಕ್ಷ ರಾಜು ವೆರ್ಣೆಕರ

ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸಲು ಮುಂದೆ ಬನ್ನಿ: ಲಯನ್ಸ್ ಕ್ಲಬ್‌ನ ಅಧ್ಯಕ್ಷ ರಾಜು ವೆರ್ಣೆಕರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಾಕ್ಷರತೆಯು ಓದು-ಬರಹ, ಸಂವಹನ, ನಿರ್ಣಾಯಕ ಚಿಂತನೆಯೊಂದಿಗೆ ಸಮಾಜದಲ್ಲಿ ಭಾಗವಹಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ದೇಶದ ಜನಸಂಖ್ಯೆಯಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಿದ್ದು, ವಿದ್ಯಾವಂತರು ಇವರನ್ನು ಸಾಕ್ಷರರನ್ನಾಗಿ ಮಾಡಬೇಕಾದ ಗುರಿ ಹೊಂದಬೇಕು ಎಂದು ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ರಾಜು ವೆರ್ಣೆಕರ ಹೇಳಿದರು.

ಅವರು ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಹಾಗೂ ಗದುಗಿನ ಮಹೇಶ್ವರಿ ವಿವಿಧೋದ್ದೇಶಗಳ ಮಹಿಳಾ ಮಂಡಳದ ಆಶ್ರಯದಲ್ಲಿ ಜರುಗಿದ ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಡತನ, ಲಿಂಗ ಸಮಾನತೆ, ನಾವೀನ್ಯತೆ ಮತ್ತು ಸಾಮಾಜಿಕ ಪ್ರಗತಿಗೆ ಅಡಿಪಾಯವಾಗಿ ಸಾಕ್ಷರತೆ ಕಾರ್ಯ ನಿರ್ವಹಿಸುತ್ತದೆ. ಸಾಕ್ಷರತಾ ದಿನಚರಣೆ ಇಂದು ಅರ್ಥಪೂರ್ಣವಾಗಿ ಸಾಧನೆ ಸಾಧಿಸಿದೆ. ಮನುಷ್ಯನ ಬುದ್ಧಿವಂತಿಕೆ, ಜ್ಞಾನ ಹೆಚ್ಚಿಸಲು ಸಾಕ್ಷರತೆ ಒಂದು ಶಕ್ತಿಯುತ ಸಾಧನವಾಗಿದ್ದು, ಮಹಿಳಾ ಸಾಕ್ಷರತೆ ಹೆಚ್ಚಿಸಲು ನಾವೆಲ್ಲರೂ ಶ್ರಮಿಸಬೇಕು ಎಂದರು.

ಕ್ಲಬ್‌ನ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಮಹಿಳೆ ತಾನು ಅನಕ್ಷರಸ್ಥೆಯಾಗಿದ್ದರೂ ಸಹ ಕುಟುಂಬವನ್ನು ಸಾಕ್ಷರರನ್ನಾಗಿ ಮಾಡುತ್ತಿರುವುದು ಅಭಿನಂದನೀಯ. ಮಹಿಳಾ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಮೃತಾ ವಾರಕರ, ಸಾಕ್ಷರತೆ ಎನ್ನುವುದು ಕೇವಲ ಓದು-ಬರಹಕ್ಕೆ ಸೀಮಿತವಾಗಿಲ್ಲ. ಜೀವನದ ಎಲ್ಲ ಸ್ಥರಗಳನ್ನು ಓದುವ, ತಿಳಿಯುವ, ಅರಿತುಕೊಳ್ಳುವುದು ಆಗಿದೆ. ಅನಕ್ಷರಸ್ಥರಿಗೆ ನಾವೆಲ್ಲರೂ ಸ್ವಯಂ ಪ್ರೇರಣೆಯಿಂದ ಅಕ್ಷರಗಳನ್ನು ಕಲಿಸುವ ಕೆಲಸ ನಡೆಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹೇಶ್ವರಿ ವಿವಿಧೋದ್ದೇಶಗಳ ಮಹಿಳಾ ಮಂಡಳದ ಅಧ್ಯಕ್ಷೆ ಜಯಶ್ರೀ ಹಿರೇಮಠ ಅವರು, ಸಾಕ್ಷರತೆ ಸಾಧನೆಯಾಗಲು ಮುತುವರ್ಜಿ ಅವಶ್ಯವಿದೆ. ಪ್ರೇರಣಾದಾಯಕವಾಗಿ ಕಲಿಕೆ ನಡೆಯಬೇಕು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ  ಮಾಡುವಲ್ಲಿ ಯುವ ಸಮುದಾಯ ಮುಂದೆ ಬರಬೇಕು ಎಂದರು.

ಸಹನಾ ಹಿರೇಮಠ, ಸುರೇಖಾ ಮಲ್ಲಾಡದ ಪ್ರಾರ್ಥಿಸಿದರು. ಪುಷ್ಪಾ ಮುನವಳ್ಳಿ ಸ್ವಾಗತಿಸಿದರು. ಕವಿತಾ ಬೇಲೇರಿ ಪರಿಚಯಿಸಿದರು. ರಶ್ಮಿಕಾ ಹಿರೇಮಠ ನಿರ್ವಹಿಸಿದರು. ರೇಣುಕಾ ಹಂದ್ರಾಳ ನಿರೂಪಿಸಿದರು. ವಿರೇಶ ಪಟ್ಟಣಶೆಟ್ಟಿ ವಂದಿಸಿದರು.

ಕಾರ್ಯಕ್ರಮದಲ್ಲಿ ಕ್ಲಬ್‌ನ ಸಾವಿತ್ರಿ ಶಿಗ್ಲಿ, ನಿತೀಶ ಸಾಲಿ, ರಾಹುಲ ಅರಳಿ, ಪೂಜಾ ಅರಳಿ, ಡಾ. ಶಾಂತ ಕುಂಬಾರ, ಮಂಜುನಾಥ ವೀರಲಿಂಗಯ್ಯನಮಠ, ಲಲಿತಾ ಸಂಗನಾಳ, ತಸ್ಲೀಮ ಸೊರಟೂರ, ವೀಣಾ ಬೈಲಿ ಮುಂತಾದವರು ಉಪಸ್ಥಿತರಿದ್ದರು.

ಕ್ಲಬ್‌ನ ಖಜಾಂಚಿ ರೇಣುಕಪ್ರಸಾದ ಹಿರೇಮಠ ಮಾತನಾಡಿ, ನಮ್ಮ ಹಳ್ಳಿಯ ಕೃಷಿಕರು ಅನಕ್ಷರಸ್ಥರಾಗಿದ್ದರೂ ಮಕ್ಕಳನ್ನು ಉನ್ನತ ಸ್ಥಾನಗಳಲ್ಲಿ ಇರುವಂತೆ ಮಾಡಿದ್ದಾರೆ. ಅನೇಕ ಕಡೆ ಇನ್ನೂ ಅನಕ್ಷರತೆ ಮನೆಮಾಡಿದ್ದು, ಸಂಘ-ಸಂಸ್ಥೆಗಳು, ಯುವಕ-ಯುವತಿ ಮಂಡಳಿಗಳು ಸ್ವಯಂ ಪ್ರೇರಿತರಾಗಿ ರಾತ್ರಿ ಶಾಲೆಗಳನ್ನು ತೆರೆದು ಅನಕ್ಷರಸ್ಥರಿಗೆ ಅಕ್ಷರಗಳನ್ನು ಕಲಿಸಿ ಅವರನ್ನು ನವಸಾಕ್ಷರರನ್ನಾಗಿ ಮಾಡುವ ಕೆಲಸಕ್ಕೆ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!