ಭೌತಿಕ ಸಂಪತ್ತು ಜೀವನ ಶಾಶ್ವತವಲ್ಲ : ಶ್ರೀ ರಂಭಾಪುರಿ ಜಗದ್ಗುರುಗಳು

0
Commemoration of Shri Rachoti Shivacharya Swami
Spread the love

ವಿಜಯಸಾಕ್ಷಿ ಸುದ್ದಿ, ಭದ್ರಾವತಿ : ಹುಟ್ಟು ಎಷ್ಟು ಸಹಜವೋ ಸಾವು ಕೂಡ ಅಷ್ಟೇ ನಿಶ್ಚಿತ. ಭೌತಿಕ ಸಂಪತ್ತು, ಜೀವನ ಶಾಶ್ವತವಲ್ಲ. ಆದರೆ ಸತ್ಯ ಧರ್ಮ ಒಂದೇ ಸ್ಥಿರವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಜರುಗಿದ ಲಿಂ.ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳವರ 57ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಅರಳಿದ ಪುಷ್ಪಗಳು ಬೀರುವ ಸುಗಂಧ ಗಾಳಿಯಲ್ಲಿ ಹರಡುವಂತೆ ಸತ್ಕಾರ್ಯಗಳಿಂದ ಮನುಷ್ಯನ ಕೀರ್ತಿ ಎಲ್ಲೆಡೆ ಹರಡುತ್ತದೆ. ಮನುಷ್ಯ ಆಶೆ ಕಳೆದುಕೊಂಡು ಬದುಕಬಹುದು. ಆದರೆ ಆಸಕ್ತಿ ಕಳೆದುಕೊಂಡು ಬಾಳಲಾಗದು.
ಧರ್ಮ, ಸತ್ಯದ ದಾರಿಯಲ್ಲಿ ನಡೆಯುವವನಿಗೆ ನೂರೆಂಟು ಕಷ್ಟಗಳು ಬಂದರೂ ಕೊನೆಗೆ ಸತ್ಯ ಧರ್ಮಗಳ ಪರಿಪಾಲನೆ ನಮ್ಮನ್ನು ಕಾಪಾಡುತ್ತದೆ. ದೇವರ ಹೆಸರಿನಲ್ಲಿ ಉಪವಾಸ ಮಾಡುವುದು ದೊಡ್ಡ ಸಾಧನೆಯಲ್ಲ.
ಜನ್ಮ ಕೊಟ್ಟ ತಂದೆ-ತಾಯಿ, ಮಾರ್ಗದರ್ಶನ ನೀಡುವ ಗುರುವಿನಲ್ಲಿ ಶ್ರದ್ಧೆಯಿಟ್ಟು ಕಾಪಾಡುವುದೇ ದೊಡ್ಡ ಸಾಧನೆ ಎಂಬುದನ್ನು ಮರೆಯಬಾರದು ಎಂದರು.
ಸಮಾರಂಭ ಉದ್ಘಾಟಿಸಿದ ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಮಾತನಾಡಿ, ಮನಸೊಂದಿದ್ದರೆ ಮಾರ್ಗವಿದೆ. ನಂಬಿಕೆಯೊಂದಿದ್ದರೆ ಜೀವನವಿದೆ. ನಿಷ್ಕಲ್ಮಶವಾದ ಭಕ್ತಿಯೊಂದಿದ್ದರೆ ಪರಮಾತ್ಮನ ಅನುಗ್ರಹ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಚಿಂತನಗಳನ್ನು ರಾಚೋಟಿ ಶ್ರೀಗಳು ಪರಿಪಾಲಿಸಿ ಭಕ್ತರಿಗೆ ಬೋಧಿಸಿದ ಶಕ್ತಿಯನ್ನು ಮರೆಯಲಾಗದು. ಅವರ ಜೀವನದ ಸಿದ್ಧಿ ಸಾಧನೆಗಳು ನಮ್ಮೆಲ್ಲರಿಗೂ ದಾರಿ ದೀಪವಾಗಲೆಂದರು.
ನೇತೃತ್ವ ವಹಿಸಿದ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ಅಧ್ಯಕ್ಷತೆ ವಹಿಸಿದ ಭದ್ರಾವತಿ ಬಿ.ಕೆ. ಮೋಹನ, ಸಮ್ಮುಖ ವಹಿಸಿದ ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.
ಸಮಾರಂಭದಲ್ಲಿ ರಟ್ಟೀಹಳ್ಳಿ, ಕೆ.ಬಿದರೆ, ಮಳಲಿಮಠ, ತಾವರೆಕೆರೆ, ಹುಣಸಘಟ್ಟ, ಹಾರನಹಳ್ಳಿ,  ಹಣ್ಣೆೆಮಠ. ನಂದಿಪುರ, ಮಾದಿಹಳ್ಳಿ, ಬೀರೂರು, ಮೆಟಕುರ್ಕೆಮಠ, ಕುರವತ್ತಿ, ನಂದಿಪುರ ಶ್ರೀಗಳವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಟಿ.ವಿ. ಈಶ್ವರಯ್ಯ, ಬಿ.ಕೆ. ಜಗನ್ನಾಥ, ಎಸ್.ಎನ್. ಮಹಾಲಿಂಗಶಾಸ್ತ್ರೀ, ಎಸ್.ಎಸ್. ಜ್ಯೋತಿಪ್ರಕಾಶ್, ಎ.ಎಂ. ಚಂದ್ರಯ್ಯ, ಹೆಚ್.ಮಲ್ಲಿಕಾರ್ಜುನಸ್ವಾಮಿ, ಡಾ.ರೇಣುಕಾರಾಧ್ಯ ಶಾಸ್ತ್ರೀಗಳು, ಸಿದ್ಧಲಿಂಗಯ್ಯ, ಉಮೇಶ ಹಿರೇಮಠ ಮುಂತಾದವರು ಶ್ರೀ ರಂಭಾಪುರಿ ಜಗದ್ಗುರುಗಳವರಿಂದ ಆಶೀರ್ವಾದ ಗುರುರಕ್ಷೆ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಕೋಟೆಮಲ್ಲೂರಿನ ಶತಾಯುಷಿ ವೇ.ಶಿವಲಿಂಗಾರಾಧ್ಯ ಶಾಸ್ತಿçಗಳವರಿಗೆ `ಸೌಜನ್ಯ ಸುಧಾಕರ ರತ್ನ’ ಎಂಬ ಪ್ರಶಸ್ತಿಯಿತ್ತು ಜಗದ್ಗುರುಗಳು ಶುಭ ಹಾರೈಸಿದರು. ಗುರುಪ್ರಸಾದ ದೇವರು ಸ್ವಾಗತಿಸಿದರು. ಶಾಂತಾ ಆನಂದ ನಿರೂಪಿಸಿದರು. ಗಂಜಿಗಟ್ಟಿ ಕೃಷ್ಣಮೂರ್ತಿ ಜಾನಪದ ಗೀತೆಗಳನ್ನು ಹಾಡಿದರು. ಅನ್ನ ದಾಸೋಹವನ್ನು ಶಾಸಕ ಬಿ.ಕೆ. ಸಂಗಮೇಶ ಸಹೋದರರು ನೆರವೇರಿಸಿದರು.
ತಪ್ಪು ನಿರ್ಣಯ ಕೈಕೊಳ್ಳಬೇಡಿ
ಇತ್ತೀಚೆಗೆ ಜಾತಿ ಜನಗಣತಿ ಹಿನ್ನೆಲೆಯಲ್ಲಿ ಸೇರಿದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಅಧ್ಯಕ್ಷರು ಮೊದಲ್ಗೊಂಡು ಹಲವಾರು ಗಣ್ಯರು ಪಾಲ್ಗೊಂಡಿದ್ದು ಸಂತೋಷದ ಸಂಗತಿ. ಮೊದಲನೆಯ ಠರಾವಿನಲ್ಲಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ತತ್ವ ಸಿದ್ಧಾಂತ ಮತ್ತು ಶ್ರೀ ಬಸವಾದಿ ಶಿವಶರಣರ ವಿಚಾರ ಧಾರೆಯಂತೆ ಮಹಾಸಭಾ ಕಾರ್ಯ ನಿರ್ವಹಿಸುತ್ತದೆ ಎಂದಾಗಬೇಕಿತ್ತು. ಆದರೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ಹೆಸರು ಕೈ ಬಿಟ್ಟಿರುವುದು ಒಳ್ಳೆಯದಲ್ಲ. ಈ ವಿಚಾರವನ್ನು ಮಹಾಸಭಾ ಗಂಭೀರವಾಗಿ ಅವಲೋಕನ ಮಾಡಿ ಸರಿಪಡಿಸುವತ್ತ ಗಮನ ಕೊಡಬೇಕಾದ ಅಗತ್ಯವಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಎಚ್ಚರಿಸಿದರು.

Spread the love
Advertisement

LEAVE A REPLY

Please enter your comment!
Please enter your name here