ಸ್ತ್ರೀ ಸಬಲೀಕರಣಕ್ಕೆ ಸಮುದಾಯದ ವಿಶ್ವಾಸ ಅಗತ್ಯ

0
avva
Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಮಹಿಳೆಯರಲ್ಲಿ ಬೌದ್ಧಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕೆ ಸಂಘ ಸಂಸ್ಥೆಗಳಿಂದ, ಸರ್ವಧರ್ಮಗಳ ಸಮಾಜಗಳಿಂದ ನೀಡುವ ಸಹಕಾರ, ಗೌರವ ಸನ್ಮಾನಗಳ ಪಾತ್ರ ಸಾಕಷ್ಟು ಪರಿಣಾಮ ಬೀರುತ್ತದೆ. ಇಂದು ಅವ್ವ ಸೇವಾ ಟ್ರಸ್ಟ್ ನವರು ನೀಡಿದ ಸನ್ಮಾನದಿಂದ ತಾಯಿ ಪ್ರೀತಿ ಸಿಕ್ಕಷ್ಟೇ ಖುಷಿಯಾಗಿದೆ ಎಂದು ಹರಪನಹಳ್ಳಿ ತಾಲೂಕಿನ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ಗುರವ್ವ ಶಿವಲಿಂಗಪ್ಪ ಹೊರಟ್ಟಿಯವರ ಸ್ಮರಣೆಗಾಗಿ ಸ್ಥಾಪಿಸಿದ ದತ್ತಿನಿಧಿ ಕಾರ್ಯಕ್ರಮದಲ್ಲಿ ಜಂಗಮ ಪುಂಗವ ಅಲ್ಲಮ ಪ್ರಭುಗಳ, ಅಕ್ಕಮಹಾದೇವಿ ಜಯಂತಿ ಮತ್ತು ಶ್ರೀಮಠದ 9ನೇ ಪೀಠಾಧಿಪತಿಗಳ 57ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್, ಅನ್ನದಾನೀಶ್ವರ ಮಠ ಹಾಗೂ ಅಕ್ಕನ ಬಳಗದವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಹಿಳೆ ಸಾಕಷ್ಟು ಸಬಲೀಕರಣ, ಸಶಕ್ತತೆ ಹೊಂದಬೇಕಾದರೆ ಎಲ್ಲ ಸಮುದಾಯದ ಪ್ರೀತಿ-ವಿಶ್ವಾಸ ಬೇಕಾಗುತ್ತದೆ. ಅಂದಾಗ ಅವಳಲ್ಲಿ ಮುನ್ನುಗ್ಗುವ ಛಲ, ಆತ್ಮ ವಿಶ್ವಾಸ, ಸಾಮರ್ಥ್ಯ ಹೆಚ್ಚಾಗುತ್ತದೆ. ಸ್ವಯಂ ನಿರ್ಧಾರ ತೆಗೆದುಕೊಳ್ಳುವಲ್ಲಿಯೂ ಅವಳು ಸಹಜವಾಗಿ ಮುಂದಾಗುತ್ತಾಳೆ. ನಾನು ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರಳಾಗಿ ಗೆಲ್ಲಲು ಹರಪನಹಳ್ಳಿಯ ಜನ ತೋರಿದ ಪ್ರೀತಿ ವಿಶ್ವಾಸವೇ ಸಾಕ್ಷಿ. ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯೊಬ್ಬಳು ಪಕ್ಷೇತರಳಾಗಿ ಗೆಲ್ಲುವುದು ಎಂದರೆ, ಇದೆಲ್ಲ ಹೆತ್ತವರ ಪ್ರೀತಿ, ಸಮಾಜ ತೋರಿದ ಸಹಕಾರದಿಂದ ಮಾತ್ರ ಸಾದ್ಯವಾಯಿತು ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ನಾಡೋಜ ಡಾ.ಅನ್ನದಾನೀಶ್ವರ ಶ್ರೀಗಳು ಆಶೀರ್ವಚನ ನೀಡಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಕೋರಿದರು. ಘನ ಉಪಸ್ಥಿತಿ ವಹಿಸಿದ ಸಭಾಪತಿ ಬಸವರಾಜ ಹೊರಟ್ಟಿಯವರು ಅವ್ವ ಸೇವಾ ಟ್ರಸ್ಟ್ ನಡೆದು ಬಂದ ದಾರಿಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಶಶಿ ಸಾಲಿ, ನಿವೃತ್ತ ಪ್ರಾ. ಕರಿಭರಮಗೌಡರ, ಡಾ. ಬಸವರಾಜ ಧಾರವಾಡ ಹಾಗೂ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ ಸೌಭಾಗ್ಯ ಬೀಳಗಿಮಠ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಳವಂಡಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಕರಬಸಪ್ಪ ಹಂಚಿನಾಳ, ಆರ್.ಬಿ. ಡಂಬಳಮಠ, ವೀರನಗೌಡ ಗುಡದಪ್ಪನವರ, ಆರ್.ಎಲ್. ಪೊಲೀಸ್‌ಪಾಟೀಲ, ಎಸ್.ಎಂ. ಅಗಡಿ, ಎಸ್.ಎಸ್. ಗಡ್ಡದ, ಎಸ್.ಪಿ. ನಿಂಬಿಮಠ, ಎಮ್.ಎಸ್. ಪೂಜಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ಬಿ.ಜಿ. ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಇನಾಮತಿ ನಿರೂಪಿಸಿದರು.
Advertisement
ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರು ಅತ್ಯಂತ ಹಿರಿಯ ಸದಸ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಅನುಭವ-ಮಾರ್ಗದರ್ಶನ ನನಗೆ ಸಾಕಷ್ಟು ಬೇಕಾಗಿದೆ. ಅವರು ಸ್ಥಾಪಿಸಿದ ಅವ್ವ ಸೇವಾ ಟ್ರಸ್ಟ್ ನಿಂದ ಸನ್ಮಾನ ಪಡೆದಿದ್ದು ನನ್ನ ಭಾಗ್ಯವೆಂದೇ ಭಾವಿಸುತ್ತೇನೆ. ತಾಯಿ ಪ್ರೀತಿ ಸಿಕ್ಕಷ್ಟೇ ಖುಷಿಯಾಗಿದೆ. ಅದರ ಜೊತೆಗೆ ಶ್ರೀಮಠ ಹಾಗೂ ಅಕ್ಕನ ಬಳಗದವರು ತೋರಿದ ಪ್ರೀತಿಯನ್ನು ನಾನು ಎಂದೂ ಮರೆಯಲಾರೆ. ಮಹಿಳೆಯರು ಯಾವುದಕ್ಕೂ ಹಿಂಜರಿಯದೇ ಎಲ್ಲ ಕ್ಷೇತ್ರಗಳಲ್ಲೂ ಪಾಲ್ಗೊಂಡು ಆಯಾ ಕ್ಷೇತ್ರಗಳಲ್ಲಿ ನಮ್ಮ ಸಾಮರ್ಥ್ಯ ತೋರಿಸಲು ಮುಂದಾಗಬೇಕು.
– ಲತಾ ಮಲ್ಲಿಕಾರ್ಜುನ.
ಹರಪನಹಳ್ಳಿ ಪಕ್ಷೇತರ ಶಾಸಕಿ.

Spread the love

LEAVE A REPLY

Please enter your comment!
Please enter your name here