ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪವಿತ್ರಾ ಗೌಡಗೆ ಕೊನೆಗೂ ಕೋರ್ಟ್ ರಿಲೀಫ್ ನೀಡಿದೆ. ವಾರಕ್ಕೊಮ್ಮೆ ಮನೆಯೂಟ ನೀಡಲು ನ್ಯಾಯಾಲಯ ಅನುಮತಿ ನೀಡಿದೆ.
ಜ.12ರಂದು ನಡೆದ ವಿಚಾರಣೆಯಲ್ಲಿ, ಪವಿತ್ರಾ ಗೌಡ ಅವರ ಆರೋಗ್ಯ ಸಮಸ್ಯೆಗಳನ್ನು ಗಮನಿಸಿದ ನ್ಯಾಯಾಲಯ, ವಾರಕ್ಕೊಮ್ಮೆ ಮನೆಯೂಟ ಕೊಡಬೇಕು ಎಂದು ಸೂಚಿಸಿದೆ. ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಮೇರೆಗೆ ಊಟ ನೀಡುವಂತೆ ಕೋರ್ಟ್ ಆದೇಶಿಸಿದೆ.
ಈ ಹಿಂದೆ ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಜೈಲಿನ ಊಟದಿಂದ ಆರೋಗ್ಯ ಹದಗೆಡುತ್ತಿದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮೊದಲಿಗೆ ನ್ಯಾಯಾಲಯ ದಿನಕ್ಕೊಮ್ಮೆ ಮನೆಯೂಟಕ್ಕೆ ಅವಕಾಶ ನೀಡಿತ್ತು.
ಆದರೆ ಕಾರಾಗೃಹ ಇಲಾಖೆ, ಇದರಿಂದ ಜೈಲಿನಲ್ಲಿರುವ ಸಾವಿರಾರು ಕೈದಿಗಳು ಇದೇ ರೀತಿಯ ಬೇಡಿಕೆ ಇಡಬಹುದು ಎಂದು ಆತಂಕ ವ್ಯಕ್ತಪಡಿಸಿ, ಮನೆಯೂಟ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಪವಿತ್ರಾ ಗೌಡ ಪರ ವಕೀಲರು, ಜೈಲಿನ ಆಹಾರದಿಂದ ಚರ್ಮರೋಗ, ಗುಳ್ಳೆಗಳು, ಫುಡ್ ಪಾಯಿಸನ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲೇ ಇದೀಗ ಕೋರ್ಟ್ ಮಧ್ಯಮ ಮಾರ್ಗವಾಗಿ ವಾರಕ್ಕೆ ಒಮ್ಮೆ ಮನೆಯೂಟಕ್ಕೆ ಅವಕಾಶ ನೀಡಿದೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಜ.13ರಂದು ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಲಾಗಿದೆ.



