HomeGadag Newsಗದಗದಲ್ಲಿ ಸಮಾಜವಿರೋಧಿ ಚಟುವಟಿಕೆಗಳಿಗೆ ಬ್ರೇಕ್; ಜಿಲ್ಲೆಯಿಂದ ಮೂವರು ಗಡಿಪಾರು!

ಗದಗದಲ್ಲಿ ಸಮಾಜವಿರೋಧಿ ಚಟುವಟಿಕೆಗಳಿಗೆ ಬ್ರೇಕ್; ಜಿಲ್ಲೆಯಿಂದ ಮೂವರು ಗಡಿಪಾರು!

For Dai;y Updates Join Our whatsapp Group

ಗದಗ: ಕೊಲೆ ಯತ್ನ, ಜೀವ ಬೆದರಿಕೆ, ಸಾರ್ವಜನಿಕ ಶಾಂತಿಭಂಗ ಹಾಗೂ ಜೂಜಾಟ–ಮಟ್ಕಾ ದಂಧೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ ಮೂವರನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಜಿಲ್ಲೆಯಲ್ಲಿ ಸಮಾಜವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೂವರು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಹಿಂದೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದರೂ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಗಡಿಪಾರು ಮಾಡಲಾಗಿದೆ.

ಸಾಹಿಲ್ ರಾಯಚೂರು ಜಿಲ್ಲೆಗೆ:

ಗದಗ ನಗರದ ದಾಸರ ಓಣಿಯ ಹುಸೇನಸಾಬ್ ಹಣಗಿ ಅವರ ಪುತ್ರ ಸಾಹಿಲ್ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ ಹಾಗೂ ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣವಾಗುವಂತಹ ಕೃತ್ಯಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದವು. ಆತನ ನಿರಂತರ ಅಪರಾಧ ಚಟುವಟಿಕೆಗಳಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಹಿಲ್‌ನ ದುರ್ವರ್ತನೆ ನಿಯಂತ್ರಿಸುವ ಉದ್ದೇಶದಿಂದ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಬಳಿಕ ಆತನನ್ನು ಗದಗ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ.

ಸಾಹಿಲ್ ವಿರುದ್ಧ ಗದಗ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳಿವೆ. ಗುನ್ನೆ ನಂ.172/2025ರಲ್ಲಿ ಬಿಎನ್‌ಎಸ್‌-2023ರ ಕಲಂ 109(1), 351(2) ಜೊತೆಗೆ 3(5) ಅಡಿ ಪ್ರಕರಣ ದಾಖಲಾಗಿದ್ದು, ಪಿಆರ್ ನಂ.07/2026ರಲ್ಲಿ ಬಿಎನ್‌ಎಸ್‌ಎಸ್‌-2023ರ ಕಲಂ 126 ಅಡಿ ಪ್ರಕರಣ ದಾಖಲಾಗಿದೆ.

ಓಸಿ–ಮಟ್ಕಾ ದಂಧೆ: ಶರೀಫ್ ಧಾರವಾಡಕ್ಕೆ:

ಬೆಳವಣಿಕೆ ಗ್ರಾಮದ ಪಕೀರಸಾಬ್ ಕೋಲಕಾರ ಅವರ ಪುತ್ರ ಶರೀಫ್ ಓಸಿ–ಮಟ್ಕಾ ಜೂಜಾಟವನ್ನು ವೃತ್ತಿಯನ್ನಾಗಿಸಿಕೊಂಡು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದ್ದ ಆರೋಪ ಎದುರಿಸುತ್ತಿದ್ದ. ಈತನ ಚಟುವಟಿಕೆಗಳಿಂದ ಬಡವರು ಹಾಗೂ ದುಡಿಯುವ ವರ್ಗದ ಜನರ ಆರ್ಥಿಕ ಪರಿಸ್ಥಿತಿಗೆ ಧಕ್ಕೆಯಾಗುವುದರ ಜತೆಗೆ ಯುವಜನತೆಯ ಮೇಲೂ ದುಷ್ಪರಿಣಾಮ ಬೀರುತ್ತಿತ್ತು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಶರೀಫ್ ವಿರುದ್ಧ ಈ ಹಿಂದೆ ಪ್ರಕರಣಗಳನ್ನು ದಾಖಲಿಸಿ ಶಿಕ್ಷೆಗೆ ಒಳಪಡಿಸಿದ್ದರೂ ತನ್ನ ಚಟುವಟಿಕೆಗಳನ್ನು ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಚಾರಣೆ ಬಳಿಕ ಆತನನ್ನು ಗದಗ ಜಿಲ್ಲೆಯಿಂದ ಧಾರವಾಡ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಶರೀಫ್ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳಿವೆ. ಗುನ್ನೆ ನಂ.23/2023, ಗುನ್ನೆ ನಂ.178/2024 ಹಾಗೂ ಗುನ್ನೆ ನಂ.33/2025 ಪ್ರಕರಣಗಳು ದಾಖಲಾಗಿದ್ದು, ಮೂರೂ ಪ್ರಕರಣಗಳಲ್ಲಿ ಕೆ.ಪಿ. ಕಾಯ್ದೆಯ ಕಲಂ 78(3) ಅಡಿ ಪ್ರಕರಣ ದಾಖಲಿಸಲಾಗಿದೆ.

ಮೂರು ಜೂಜಾಟ ಪ್ರಕರಣ: ಚೆನ್ನಯ್ಯ ಕೊಪ್ಪಳಕ್ಕೆ:

ರೋಣ ತಾಲೂಕಿನ ಸವಡಿ ಗ್ರಾಮದ ಚೆನ್ನಯ್ಯ ಅಲಿಯಾಸ್ ಚೆನ್ನಬಸಯ್ಯ ವಿರೂಪಾಕ್ಷಯ್ಯ ಚರಂತಿಮಠ ಕೂಡ ಜೂಜಾಟ ಹಾಗೂ ಮಟ್ಕಾ ದಂಧೆಯಲ್ಲಿ ತೊಡಗಿಕೊಂಡಿದ್ದ ಆರೋಪದ ಮೇಲೆ ಗಡಿಪಾರಿಗೆ ಒಳಗಾಗಿದ್ದಾನೆ. ಜೂಜಾಟವನ್ನು ವೃತ್ತಿಯಾಗಿಸಿಕೊಂಡಿದ್ದ ಆತನ ಚಟುವಟಿಕೆಗಳಿಂದ ಬಡವರು, ದುಡಿಯುವ ವರ್ಗ ಹಾಗೂ ಯುವಜನತೆಯ ಮೇಲೆ ದುಷ್ಪರಿಣಾಮ ಬೀರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನಯ್ಯ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಜೂಜಾಟಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿವೆ. ಗುನ್ನೆ ನಂ.152/2024, ಗುನ್ನೆ ನಂ.26/2025 ಹಾಗೂ ಪಿಆರ್ ನಂ.125/2025 ಪ್ರಕರಣಗಳಲ್ಲಿ ಕೆ.ಪಿ. ಆ್ಯಕ್ಟ್‌ನ ಕಲಂ 78(3) ಅಡಿ ಪ್ರಕರಣ ದಾಖಲಿಸಲಾಗಿದೆ.

ಹಿಂದಿನ ಪ್ರಕರಣಗಳಿದ್ದರೂ ತನ್ನ ಚಟುವಟಿಕೆಗಳನ್ನು ಮುಂದುವರಿಸಿದ್ದರಿಂದ ಆತನ ದುರ್ವರ್ತನೆ ನಿಯಂತ್ರಿಸುವ ಉದ್ದೇಶದಿಂದ ರೋಣ ಪೊಲೀಸ್ ಠಾಣೆಯಿಂದ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಚಾರಣೆ ಬಳಿಕ ಚೆನ್ನಯ್ಯನನ್ನು ಗದಗ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆ, ಜೂಜಾಟ, ಮಟ್ಕಾ ಸೇರಿದಂತೆ ಸಮಾಜವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಈ ಗಡಿಪಾರು ಕ್ರಮ ಎಚ್ಚರಿಕೆಯಾಗಿದೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಮುಂದೆಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ರೋಹನ್ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img