ರಾಯಚೂರು: ಮಂತ್ರಾಲಯ ಶ್ರೀಮಠದ ಆವರಣದಲ್ಲಿದ್ದ ಕಾರ್ಮಿಕರ ಶೆಡ್ಗಳಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿದ್ದರೂ ಕಾರ್ಮಿಕರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ನರಹರಿ ತೀರ್ಥ ವಸತಿ ಗೃಹಗಳ ಸಮೀಪ ನಿರ್ಮಾಣ ಕಾಮಗಾರಿಗಾಗಿ ಬಂದಿದ್ದ ಕಾರ್ಮಿಕರು ತಾತ್ಕಾಲಿಕ ಶೆಡ್ಗಳಲ್ಲಿ ವಾಸಿಸುತ್ತಿದ್ದರು. ಮಧ್ಯಾಹ್ನದ ವೇಳೆ ತೀವ್ರ ಬಿಸಿಲಿನ ಪರಿಣಾಮ ಶೆಡ್ನಲ್ಲಿದ್ದ ಎರಡು-ಮೂರು ಗ್ಯಾಸ್ ಸಿಲಿಂಡರ್ಗಳು ಸ್ಫೋಟಗೊಂಡಿವೆ ಎಂದು ತಿಳಿದುಬಂದಿದೆ.
ಸಿಲಿಂಡರ್ ಸ್ಫೋಟದಿಂದ ಶೆಡ್ಗಳಿಗೆ ಬೆಂಕಿ ವ್ಯಾಪಿಸಿ ಕಾರ್ಮಿಕರ ಆಹಾರ ಸಾಮಗ್ರಿ, ದೈನಂದಿನ ಬಳಕೆಯ ವಸ್ತುಗಳು ಮತ್ತು ಇತರೆ ಸಾಮಾನುಗಳು ಸುಟ್ಟು ಹೋಗಿವೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಮಂತ್ರಾಲಯ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಮಿಕರು ಕೆಲಸಕ್ಕೆ ತೆರಳಿದ್ದ ಸಮಯದಲ್ಲೇ ಅವಘಡ ಸಂಭವಿಸಿದ್ದರಿಂದ ಭಾರಿ ದುರಂತ ತಪ್ಪಿದೆ ಎಂದು ಅವರು ತಿಳಿಸಿದ್ದಾರೆ.
ಅಗ್ನಿಶಾಮಕ ದಳ ಮತ್ತು ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ನಷ್ಟಕ್ಕೊಳಗಾದ ಕಾರ್ಮಿಕರಿಗೆ ಶ್ರೀಮಠದಿಂದ ನೆರವು ನೀಡಲಾಗುವುದು ಎಂದು ಶ್ರೀಗಳು ಭರವಸೆ ನೀಡಿದ್ದಾರೆ.



