ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಪ್ಪಗೊಂಡನಹಳ್ಳಿ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟದಿಂದ ಗುಡಿಸಲು ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಚಿತ್ರಲಿಂಗಪ್ಪ ಅವರಿಗೆ ಸೇರಿದ ಮನೆ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಸಿಲಿಂಡರ್ ಸ್ಫೋಟದಿಂದ ಉಂಟಾದ ಅಗ್ನಿಯಲ್ಲಿ ಮನೆಯಲ್ಲಿದ್ದ ಸುಮಾರು 3 ಲಕ್ಷ ರೂಪಾಯಿ ನಗದು, ಚಿನ್ನಾಭರಣ ಹಾಗೂ ದವಸ ಧಾನ್ಯಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯ ವೇಳೆ ಮನೆಯಲ್ಲಿ ಯಾರೂ ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ತಿಳಿದುಬಂದಿದೆ.
ತಹಶೀಲ್ದಾರ್ ರೇಹಾನ್ ಪಾಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



