ಆದರ್ಶ ಮಕ್ಕಳು ಸಮಾಜವನ್ನು ಬೆಳಗಲಿ : ವೈಶಾಲಿ ಎಂ.ಎಲ್

0
viashal m l
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮಗುವನ್ನು ದತ್ತು ಪಡೆದ ದಂಪತಿಗಳು ಮಗುವಿಗೆ ಒಳ್ಳೆ ಸಂಸ್ಕಾರ, ಸಂಸ್ಕೃತಿಯೊಂದಿಗೆ ಉತ್ತಮ ಶಿಕ್ಷಣ ನೀಡಿ ಆದರ್ಶ ವ್ಯಕ್ತಿಯನ್ನಾಗಿ ಮಾಡಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹೇಳಿದರು.
ಅವರು ಸೋಮವಾರ ಬೆಟಗೇರಿಯ ಸೇವಾಭಾರತಿ ಟ್ರಸ್ಟ್ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಗೊಂಡ ಮಗುವನ್ನು ಕೇರಳದ ಮಕ್ಕಳಿಲ್ಲದ ದಂಪತಿಗೆ ಕಾನೂನಿನಡಿ ಹಸ್ತಾಂತರಿಸಿ ಮಾತನಾಡಿದರು.
ಬೇರೆ ರೀತಿಯ ಸಂಬಂಧಗಳಿಂದಾಗಿ ಜನಿಸುವ, ಹೆತ್ತವರಿಗೆ ಬೇಡವಾಗುವ ಮಕ್ಕಳ ಸಂಖ್ಯೆ ಇಳಿಮುಖವಾಗಿ, ಕ್ರಮೇಣ ಶೂನ್ಯವಾಗಲಿ ಎಂದ ಜಿಲ್ಲಾಧಿಕಾರಿಗಳು, ಆದರ್ಶ ಸಮಾಜದಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಪಡೆದ ದಂಪತಿಗಳಿಂದ ಆದರ್ಶ ಮಕ್ಕಳು, ಕುಟುಂಬ, ಸಮಾಜವನ್ನು ಬೆಳಗುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಈಶಣ್ಣ ಮುನವಳ್ಳಿ, ಉಮಾ ಈಶಣ್ಣ ಮುನವಳ್ಳಿ ದಂಪತಿಗಳು ಸಂಸ್ಥೆಯಲ್ಲಿ ಪೋಷಣೆಗೊಂಡ ಮಗುವನ್ನು ಜಿಲ್ಲಾಧಿಕಾರಿಗಳಿಂದ ಪಡೆದು ಮಕ್ಕಳಿಲ್ಲದ ಕೇರಳದ ದಂಪತಿಗೆ ಹಸ್ತಾಂತರಿಸಿ ಮಗುವಿಗೆ ಹೂಮಾಲೆ ಹಾಕಿ ಶುಭ ಕೋರಿದರು.
ಮಗುವನ್ನು ದತ್ತು ಪಡೆದ ದಂಪತಿಗಳು ಮಗುವಿಗೆ ಸದೃಢ ಆರೋಗ್ಯ, ಉತ್ತಮ ಸಂಸ್ಕಾರ, ಸಂಸ್ಕೃತಿ, ಶಿಕ್ಷಣ ನೀಡಲಿ. ಭವಿಷ್ಯದಲ್ಲಿ ಮಗುವಿಗೆ ದತ್ತು ತಂದೆ-ತಾಯಿ ಎಂಬ ಭಾವನೆ ಬರದಂತೆ ತಮ್ಮ ರಕ್ತ ಹಂಚಿಕೊಂಡು ಬೆಳೆದ ಮಗುವೆಂದು ಭಾವಿಸಿ ಪ್ರೀತಿ, ಮಮತೆ, ಕಕ್ಕುಲತೆಯೊಂದಿಗೆ ಸಂಸಾರ ನಂದನವನದಂತೆ ಇರಲಿ ಎಂದು ಈಶಣ್ಣ ಮುನವಳ್ಳಿ ಶುಭ ಕೋರಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರ ದತ್ತು ಮಗು ಪಡೆಯುವ ಕ್ರಮಗಳನ್ನು ವಿವರಿಸಿದರು. ಮಂಜುನಾಥ ಚನ್ನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದತ್ತು ಸ್ವೀಕಾರ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಸಂದರ್ಭೋಚಿತವಾಗಿ ಮಾತನಾಡಿದರು.
ಚೇತನ್ ಮೇರವಾಡೆ ಪ್ರಾರ್ಥಿಸಿದರು, ನಾಗವೇಣಿ ಕಟ್ಟಿಮನಿ ಸ್ವಾಗತಿಸಿದರು. ನರಸಿಂಹ ಕಾಮರ್ತಿ ನಿರೂಪಿಸಿದರು, ರಾಜೇಶ ಖಟವಟೆ ವಂದಿಸಿದರು. ಸಮಾರಂಭದಲ್ಲಿ ನಗರಸಭಾ ಸದಸ್ಯರಾದ ರಾಘವೇಂದ್ರ ಯಳವತ್ತಿ, ಮಾಧುಸಾ ಮೇರವಾಡೆ, ಜಯರಾಜ ಮುಳಗುಂದ, ಲುಕ್ಕಣಸಾ ರಾಜೋಳಿ, ಥಾಮಸ್ ಮ್ಯಾಚ್ಯು, ಲಲಿತಾಬಾಯಿ ಮೇರವಾಡೆ, ಉಮಾ ಚನ್ನಪ್ಪನವರ, ಪುಷ್ಪಾವತಿ ಕಾಮರ್ತಿ, ಶ್ರೀಧರ ಕಾಂಬಳೆ, ಪ್ರಮೋದ ಹಿರೇಮಠ ಮುಂತಾದವರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಈಶಣ್ಣ ಮುನವಳ್ಳಿ, ಎಲ್ಲೋ ಜನ್ಮ ತಾಳಿದ ಮಗು ಎಲ್ಲೋ ಜೀವನ ರೂಪಿಸಿಕೊಳ್ಳುವದು ಮನ ಕಲಕುವ, ಮನ, ಮಾನವೀಯತೆ ಕಟ್ಟುವ ಸನ್ನಿವೇಶ. ತಂದೆ-ತಾಯಿಗೆ ಹಾತೊರೆಯುವ ಮಗು ಒಂದೆಡೆಯಾದರೆ, ಮಕ್ಕಳಿಲ್ಲದ ಚಿಂತೆಯಲ್ಲಿ ಕೊರಗುವ ದಂಪತಿ ಇನ್ನೊಂದೆಡೆ. ಮೂರು ಜೀವಾತ್ಮಗಳನ್ನು ಒಂದೆಡೆ ಬೆಸುಗೆಗೊಳಿಸುವ ಈ ಕಾರ್ಯ ನಿಜಕ್ಕೂ ಮಾನಸಿಕ ನೆಮ್ಮದಿ ನೀಡುವಂತದ್ದು, ಪುಣ್ಯ ಪ್ರಾಪ್ತಿಯಾಗುವಂತದ್ದು ಎಂದು ಅಭಿಪ್ರಾಯಪಟ್ಟರು.

Spread the love

LEAVE A REPLY

Please enter your comment!
Please enter your name here