HomeGadag Newsಸತ್ತುಬಿದ್ದ ಮೀನು, ತ್ಯಾಜ್ಯದ ಎತ್ತುವಳಿ

ಸತ್ತುಬಿದ್ದ ಮೀನು, ತ್ಯಾಜ್ಯದ ಎತ್ತುವಳಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಇಟ್ಟಿಗೆರೆಯ ದಡದಲ್ಲಿ ಗುರುವಾರ ಸಾವಿರಾರು ಮೀನುಗಳು, ಜಲಚರಗಳ ಮಾರಣ ಹೋಮದಿಂದ ಕೆರೆ ಸುತ್ತಮುತ್ತಲಿನ ಇಡೀ ಪ್ರದೇಶ ಗಬ್ಬು ವಾಸನೆ ಬೀರುವ ಜತೆಗೆ ರೋಗಭೀತಿ ಹರಡುವ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಎಚ್ಚೆತ್ತಿರುವ ತಾಲೂಕಾಡಳಿತ, ಪುರಸಭೆ ಶುಕ್ರವಾರ ಬೆಳ್ಳಂಬೆಳಿಗ್ಗೆಯೇ ಕೆರೆಯ ದಂಡೆಯ ಸುತ್ತಲೂ ಸತ್ತುಬಿದ್ದ ಮೀನು, ತ್ಯಾಜ್ಯ ಎತ್ತುವಳಿ ಮಾಡಿ ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡರು.

ಏಕಾಎಕಿ ಇಷ್ಟೊಂದು ಪ್ರಮಾಣದಲ್ಲಿ ಸತ್ತ ಮೀನು ಎಲ್ಲಿಂದ ಬಂದವು ಎಂಬ ಪ್ರಶ್ನೆಗೆ ಉತ್ತರ ಹುಡುಕಲಾಗಿ, ಕಳೆದ 2/3 ವರ್ಷಗಳಿಂದ ತಾಲೂಕಿನ ಶೆಟ್ಟಿಕೇರಿ ಗ್ರಾಮದ ರುದ್ರಪ್ಪ ಲಮಾಣಿ ಈ ಕೆರೆಯಲ್ಲಿ ಮೀನು ಸಾಕಾಣಿಕೆಗೆ ಅನುಮತಿ ಪಡೆದು ಮೀನು ಮರಿ ಬಿಟ್ಟಿದ್ದರು. 2 ವರ್ಷದಿಂದ ಕೆರೆಗೆ ಪೂರ್ಣ ಪ್ರಮಾಣದಲ್ಲಿ ನೀರು ಬಂದಿಲ್ಲ. ಕೆರೆಗೆ ಚರಂಡಿ ನೀರಿನೊಂದಿಗೆ ಬಂದು ಸೇರುವ ಅಪಾರ ಪ್ರಮಾಣದ ತ್ಯಾಜ್ಯ, ಕೆಮಿಕಲ್ಸ್, ಬಯಲು ಶೌಚ ಮತ್ತು ವಿಷಯುಕ್ತ ನೀರಿನಿಂದ ಸಾವಿರಾರು ಮೀನು, ಜಲಚರಗಳು ಸಾವನ್ನಪ್ಪಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ತಹಸೀಲ್ದಾರ ವಾಸುದೇವ ಸ್ವಾಮಿ, ಮುಖ್ಯಾಧಿಕಾರಿ ಮಹೇಶ ಹೆಚ್, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪೌರ ಕಾರ್ಮಿಕರಿಂದ ಸತ್ತ ಮೀನು, ತ್ಯಾಜ್ಯ ಎತ್ತುವಳಿ ಮಾಡಿಸಿದರು. ಅದರೆ, ಗಬ್ಬು ವಾಸನೆ ಬೀರುತ್ತಿದ್ದ ಸತ್ತ ಮೀನುಗಳ ಎತ್ತುವಳಿಗೆ ಪೌರ ಕಾರ್ಮಿಕರು ಪರದಾಡಿದ್ದು ಮಾತ್ರ ಪ್ರಶ್ನಾರ್ಹವೇ ಆಗಿತ್ತು.

ಕೆರೆಯಲ್ಲಿ ಮೀನುಗಳ ಮಾರಣ ಹೋಮದ ಸುದ್ದಿ ತಿಳಿಯುತ್ತಿದ್ದಂತೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿನಾಯಕ ಬೇವಿನಹಳ್ಳಿ ಶುಕ್ರವಾರ ಪಟ್ಟಣದ ಇಟ್ಟಿಗೆರೆಗೆ ಭೇಟಿ ನೀಡಿ, ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ಕಲುಷಿತ ನೀರು ಸೇರಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಉಸಿರಾಟದ ತೊಂದರೆಯಿಂದ ಮೀನುಗಳು ಸತ್ತಿವೆ. ಕೆರೆಯ ಸುತ್ತಲಿನ ಪ್ರದೇಶ ಮತ್ತು ನೀರನ್ನು ಸ್ವಚ್ಛಗೊಳಿಸುವದರೊಂದಿಗೆ ಚರಂಡಿ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕು. ನೀರಿನ ಶುದ್ಧತೆಗೆ ಸುಣ್ಣವನ್ನು ನೀರಿನಲ್ಲಿ ಮಿಶ್ರಣ ಮಾಡಿ ಕೆರೆಯ ಸುತ್ತಲೂ ಸಿಂಪಡಿಸಬೇಕು, ಪೋಟ್ಯಾಸಿಯಂ ಪರ್ಮಾಂಗನೇಟ್ (ಕೆಎಂಎನ್‌ಓ) ನಿಗದಿತ ಪ್ರಮಾಣದಲ್ಲಿ ನೀರಿನಲ್ಲಿ ಸಿಂಪಡಣೆ ಮಾಡುವುದರಿಂದ ಮೀನುಗಳ ಉಸಿರಾಟಕ್ಕೆ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.

ಇಟ್ಟಿಕೆರೆ ದಂಡೆಯಲ್ಲಿ ಸತ್ತ ಮೀನುಗಳನ್ನು ಪೌರ ಕಾರ್ಮಿಕರಿಂದ ಎತ್ತುವಳಿ ಮಾಡಿಸಿ ಘನತಾಜ್ಯ ಘಟಕದ ಜಾಗೆಯಲ್ಲಿ ಆಳವಾಗಿ ಹೂಳಲಾಗುವುದು. ಕೆರೆಗೆ ಬರುವ ಕಲುಷಿತ ತಡೆಯಲು ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದ್ದರೂ ಇತ್ತೀಚೆಗೆ ಸುರಿದ ದೊಡ್ಡ ಮಳೆಗೆ ಚರಂಡಿ ನೀರು ಹರಿದು ಬಂದಿದೆ. ಕೆರೆಯ ಸುತ್ತ ವಾಸನೆ ಬರದಂತೆ ಬ್ಲೀಚಿಂಗ್ ಪೌಡರ್ ಹಾಕಿ ಕೆರೆಯಂಚಿನ ಸ್ವಚ್ಛತೆಗೆ ಆದ್ಯತೆ ನೀಡಲಾಗುವದು. ಈಗಾಗಲೇ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಟೆಂಡರ್ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಕೆರೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಮಂಜುನಾಥ ಮುದಗಲ್.

ಹಿರಿಯ ಅರೋಗ್ಯ ನಿರೀಕ್ಷಕರು, ಪುರಸಭೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!