ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಕ ಸಮುದಾಯದ ನಂಬುಗೆಯ ನಾಯಕರಾಗಿ, ಅವರ ಬಾಳಿಗೆ ದಾರಿ ತೋರಿದ ಬಸವರಾಜ ಹೊರಟ್ಟಿಯವರ 44 ವರ್ಷಗಳ ಸುದೀರ್ಘ ಸಂಸದೀಯ ಪಯಣದ ಯಶೋಗಾಥೆ ಕುರಿತು ಏ.23ರಂದು ಸಾಯಂಕಾಲ 7.30 ಗಂಟೆಗೆ ಜ.ತೋಂಟದಾರ್ಯ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ `ದಿಟ್ಟ ಹೆಜ್ಜೆ’ ಹಾಗೂ `ಮೈಲುಗಲ್ಲುಗಳೇ ಮಾತನಾಡುತ್ತವೆ’ ಎಂಬ ಎರಡು ಅಮೂಲ್ಯ ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು.
ಕಲಬುರ್ಗಿ ಸಾರಂಗಮಠದ ಸಾರಂಗಧರ ದೇಶೀಕೇಂದ್ರ ಮಹಾಸ್ವಾಮಿಗಳು, ಚಿತ್ತರಗಿ-ಇರಕಲ್ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಮಹಾಸ್ವಾಮಿಗಳು ಸಮ್ಮುಖ ವಹಿಸುವರು. ಸಮಾರಂಭದ ಘನ ಉಪಸ್ಥಿತಿಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ವಹಿಸುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ ಅತಿಥಿಗಳಾಗಿ ಭಾಗವಹಿಸುವರು.
ಸಿದ್ಧಯ್ಯನಕೋಟೆ ವಿಜಯಮಹಾಂತೇಶ್ವರ ಶಾಖಾಮಠದ ಬಸವಲಿಂಗ ಮಹಾಸ್ವಾಮಿಗಳನ್ನು ಸಂಮಾನಿಸಲಾಗುವುದು. ಧಾರವಾಡ ಆಕಾಶವಾಣಿ ಕಲಾವಿದರಾದ ಕುಮಾರ ಮರಡೂರ ಹಾಗೂ ಋತಿಕಾ ನೃತ್ಯ ನಿಕೇತನ ತಂಡದ ನಾಗರತ್ನ ಹಡಗಲಿಯವರಿಂದ ವಚನ ನೃತ್ಯರೂಪಕ ಜರುಗುವುದು ಎಂದು ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ ಹಾಗೂ ಡಾ.ಬಸವರಾಜ ಧಾರವಾಡ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.