ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ : ಬಸವರಾಜ ಬೊಮ್ಮಾಯಿ

0
janatha
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಉದ್ಯಮ, ಜವಳಿ ಪಾರ್ಕ್, ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್, ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದನಾ ಒಕ್ಕೂಟ ಸೇರಿದಂತೆ ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ, ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಶನಿವಾರ ಗದಗ ನಗರದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಏರ್ಪಡಿಸಿದ್ದ `ಜನತಾ ಸಂವಾದ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಮತ್ತು ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದರು.

samvada

ಪ್ರಜಾಪ್ರಭುತ್ವದಲ್ಲಿ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡರೆ ಹೆಚ್ಚು ಅನುಕೂಲವಾಗುತ್ತದೆ.

ಪ್ರಜಾಪ್ರಭುತ್ವದಲ್ಲಿ ಕೇವಲ ಮತ ಹಾಕುವುದಷ್ಟೇ ಮುಖ್ಯವಲ್ಲ. ಆ ನಂತರದ ಆಗು-ಹೋಗುಗಳಲ್ಲಿ ಜನರು ಪಾಲ್ಗೊಳ್ಳಬೇಕು. ಅಭಿವೃದ್ಧಿಯಲ್ಲಿ ಜನರನ್ನು ಪಾಲುದಾರರನ್ನಾಗಿ ಮಾಡಬೇಕು. ಅದಕ್ಕೆ ಜನರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಅದನ್ನು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರಂಭಿಸಿದ್ದಾರೆ. ನಮ್ಮ ಪಕ್ಷದ ಸಂಕಲ್ಪ ಪತ್ರ ಕೂಡ ಇದೇ ಆಶಯ ಹೊಂದಿದೆ ಎಂದರು.

ಸಂವಾದದಲ್ಲಿ ಹಲವಾರು ಸಮಸ್ಯೆಗಳ ಪ್ರಸ್ತಾಪದೊಂದಿಗೆ ಸಲಹೆಗಳನ್ನು ನೀಡಿದ್ದೀರಿ, ಮೂಲಭೂತ ಸೌಕರ್ಯಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದೀರಿ, ನಮ್ಮನ್ನು ಚಿಂತನೆಗೆ ಹಚ್ಚಿದ್ದೀರಿ. ನಾನು ಪ್ರಾಮಾಣಿಕವಾಗಿ ನಿಮ್ಮ ಕೆಲಸ ಮಾಡುತ್ತೇನೆ ಎಂದರು.

ನೇಕಾರರ ಸಮಸ್ಯೆ ಕುರಿತು ಪ್ರಸ್ತಾಪ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಹ್ಯಾಂಡ್‌ಲೂಮ್ ಮಾದರಿಯಲ್ಲಿ ಪವರ್ ಲೂಮ್ ನೇಕಾರರಿಗೆ ಸವಲತ್ತುಗಳನ್ನು ನೀಡಿದ್ದೇವೆ. ನೇಕಾರ ಸಮ್ಮಾನ ಯೋಜನೆ ಮಾಡಿದ್ದೇವೆ. 50 ಯುನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಿದ್ದೇವೆ. ಸಹಕಾರಿ ಬ್ಯಾಂಕ್ ಮಾದರಿಯಲ್ಲಿ ಸಾಲ ನೀಡುವ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದರು.

ಮಾಜಿ ಸೈನಿಕರಿಗೆ ಭವನ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು. ಮುದ್ರಣ ಉದ್ಯಮಕ್ಕೆ ಅಗತ್ಯ ಸೌಲಭ್ಯ ಕೊಡುವ ಕೆಲಸ ಮಾಡಲಾಗುವುದು. ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ 1100 ಕೋಟಿ ರೂ.ಬಾಕಿ ಉಳಿಸಿಕೊಂಡಿದೆ. ಸ್ಥಳೀಯ ಮುಖಂಡರ ಸಹಕಾರ ಸಿಕ್ಕರೆ ಈ ಜಿಲ್ಲೆಗೂ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ಮಾಡಲು ಕ್ರಮ ವಹಿಸಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದೆ ಎಂದರು.

ಮೆಣಸಿನಕಾಯಿ ಬೆಳೆಗಾರರಿಗೆ ಕೋಲ್ಡ್ ಸ್ಟೋರೇಜ್ ಅಗತ್ಯವಿದ್ದು, ಈ ಭಾಗದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ ಮಾಡಲಾಗುವುದು. ಇದಕ್ಕೆ ಸೂಕ್ತ ಜಮೀನಿನ ಅಗತ್ಯವಿದ್ದು, ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ಉದ್ಯಮಗಳನ್ನು ತರಲು ಪ್ರಯತ್ನ ಮಾಡಲಾಗುವುದು. ಗದಗ ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡುವ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಬಂಜಾರಾ ಸಮುದಾಯದ ಮೀಸಲಾತಿ ಹೆಚ್ಚಳ ಮಾಡುವ ಕುರಿತು ಬಂದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಪ್ರಮಾಣ ಶೇ.50ರ ಮಿತಿ ಸಡಿಲಗೊಳಿಸಿದರೆ ಎಲ್ಲ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳವಾಗುತ್ತದೆ. ಫುಡ್ ಪ್ರೊಸೆಸಿಂಗ್ ಪಾರ್ಕ್ ಮಾಡಲು ಹೆಚ್ಚಿನ ಅವಕಾಶ ಇದೆ. ಅದಕ್ಕೆ ಹೆಚ್ಚಿನ ಶ್ರಮ ವಹಿಸಲಾಗುವುದು. ಬೆಟಗೇರಿಯನ್ನು ನೇಕಾರರ ಹಬ್ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದೊಂದು ಕಣ್ಣು ತೆರೆಸುವ, ಸಕಾರಾತ್ಮಕ ಚರ್ಚೆಯ ಕಾರ್ಯಕ್ರಮವಾಗಿದೆ. ನಾವು-ನೀವು ಸೇರಿ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದರು.

bommayi

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ್, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಕಾಂತರಾಜ ಬನ್ಸಾಲಿ ಮತ್ತಿತರರು ಹಾಜರಿದ್ದರು.

ಗದಗನಲ್ಲಿ ಪ್ರಮುಖವಾಗಿ ನೀರಿನ ಸಮಸ್ಯೆ ಇದೆ. ನೀರಿನ ಸಮಸ್ಯೆಗೆ ಇದುವರೆಗೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಮಲಪ್ರಭಾ ಯೋಜನೆಯಿಂದ ನೀರು ತಂದರೂ ಸೋರಿಕೆಯಾಗುತ್ತಿದೆ. ಸಿಂಗಟಾಲೂರು ಯೋಜನೆ ಮಾಡಿದ ಮೇಲೆ ಬ್ಯಾರೇಜ್‌ನಲ್ಲಿ ನೀರು ಸಂಗ್ರಹ ಮಾಡಲು ಅವಕಾಶವಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಅಮೃತ-2 ಯೊಜನೆ ಅಡಿ 140 ಕೋಟಿ ರೂ.ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದೇವೆ. ಈಗಿನ ಸರ್ಕಾರ ಅದನ್ನು ಸರಿಯಾಗಿ ಅನುಷ್ಠಾನ ಮಾಡಿದರೆ, ಗದಗ ನಗರದ ನೀರಿನ ಬಹುತೇಕ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
– ಬಸವರಾಜ ಬೊಮ್ಮಾಯಿ.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ,
ಮಾಜಿ ಮುಖ್ಯಮಂತ್ರಿಗಳು.

ನಾನು ಸಿಎಂ ಇದ್ದಾಗ ಗದಗ ಸೇರಿ ಮೂರು ಕಡೆ ಜವಳಿ ಪಾರ್ಕ್ ಮಾಡಲು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೆ. ಮುಂದಿನ ದಿನಗಳಲ್ಲಿ ಗದುಗಿನಲ್ಲಿ ಜವಳಿ ಪಾರ್ಕ್ ಮಾಡಲು ಕ್ರಮ ಕೈಗೊಳ್ಳಲಾಗುವುದು. ಗಾರ್ಮೆಂಟ್ ಸ್ಥಾಪನೆ ಮಾಡುವುದರಿಂದ ಹೆಣ್ಣು ಮಕ್ಕಳಿಗೆ ಉದ್ಯೋಗ ಸಿಗುತ್ತದೆ. ಶಿಗ್ಗಾವಿಯಲ್ಲಿ ಗಾರ್ಮೆಂಟ್ ಸ್ಥಾಪನೆ ಮಾಡಿದ್ದು, ಅದರಿಂದ ಐದು ಸಾವಿರ ಮಹಿಳೆಯರು ಉದ್ಯೋಗ ಪಡೆದಿದ್ದಾರೆ. ಅದೇ ರೀತಿ ಗದುಗಿನಲ್ಲಿಯೂ ಸ್ಥಾಪನೆ ಮಾಡಲಾಗುವುದು. ಇದರಿಂದ ಹೆಚ್ಚಿನ ಮಹಿಳೆಯರಿಗೆ ಉದ್ಯೋಗವಕಾಶಗಳು ದೊರೆಯಲಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.


Spread the love

LEAVE A REPLY

Please enter your comment!
Please enter your name here