ವಿಜಯಸಾಕ್ಷಿ ಸುದ್ದಿ, ಡಂಬಳ: ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಲಿದ್ದು, ರೋಣ ಮತಕ್ಷೇತ್ರದ ಜನಪ್ರಿಯ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಂಡರಗಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಗೂ ಮುಂಡರಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿ.ಎಸ್. ಪಾಟೀಲರು ರೋಣ ಮತಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಜಿಲ್ಲೆಯ ಕಾಂಗ್ರೆಸ್ ಶಾಸಕರ ಪೈಕಿ ಹಿರಿಯ ಹಾಗೂ ಅನುಭವಿ ನಾಯಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದು, ಕ್ಷೇತ್ರವನ್ನು ಕಾಂಗ್ರೆಸ್‌ನ ಭದ್ರಕೋಟೆಯಾಗಿ ರೂಪಿಸಿದ್ದಾರೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಸುಮಾರು 25 ಸಾವಿರ ಮತಗಳ ಭಾರೀ ಅಂತರದಲ್ಲಿ ಜಯಗಳಿಸಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ರೈತರು, ಕಾರ್ಮಿಕರು, ಬಡವರು ಹಾಗೂ ಹಿಂದುಳಿದ ವರ್ಗಗಳ ಪರ ಸದಾ ಸ್ಪಂದಿಸುವ ಜನನಾಯಕರಾಗಿ ಜಿ.ಎಸ್. ಪಾಟೀಲರು ಗುರುತಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೇ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆದಿತ್ತು. ಆಗ ಹೈಕಮಾಂಡ್ ಮುಂದಿನ ಸಂಪುಟ ಪುನರ್‌ರಚನೆಯಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿತ್ತು ಎಂದು ತಿಳಿಸಿದ್ದಾರೆ.
ಈಗ ಸೂಕ್ತ ಸಮಯ ಬಂದಿರುವುದರಿಂದ, ಕಾಂಗ್ರೆಸ್ ಹೈಕಮಾಂಡ್ ತನ್ನ ಭರವಸೆಯನ್ನು ಈಡೇರಿಸಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಜ್ಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲು ಅವಕಾಶ ಕಲ್ಪಿಸಬೇಕು ಎಂದು ಡಿ.ಡಿ. ಮೋರನಾಳ ಮನವಿ ಮಾಡಿದ್ದಾರೆ.



