ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಮುಂಗಾರು ಮಳೆ ನಿರೀಕ್ಷೆಯ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಹೊಲಗದ್ದೆಗಳಲ್ಲಿ ಮತ್ತೆ ರೈತರ ಸಂಭ್ರಮ ಮನೆಮಾಡಿದೆ.
ಬೆಳಗಿನ ಜಾವದಿಂದಲೇ ರೈತರು ಎತ್ತುಗಳ ಜೋಡಿ ಹಾಗೂ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಕೃಷಿ ಪರಿಕರಗಳೊಂದಿಗೆ ಹೊಲಗಳಿಗೆ ಇಳಿದು ಉಳಿಮೆ ಮತ್ತು ಬಿತ್ತನೆ ಕಾರ್ಯದಲ್ಲಿ ತೊಡಗಿರುವ ದೃಶ್ಯಗಳು ಗ್ರಾಮೀಣ ಬದುಕಿನ ಸೊಬಗನ್ನು ಮತ್ತಷ್ಟು ಹೆಚ್ಚಿಸಿವೆ.
ಮಳೆಯೇ ರೈತರ ಬದುಕಿನ ಜೀವನಾಡಿಯಾಗಿದ್ದು, ಉತ್ತಮ ಬೆಳೆ ನಿರೀಕ್ಷೆಯೊಂದಿಗೆ ರೈತರು ಭೂಮಿ ಸಿದ್ಧಪಡಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿದ್ದಾರೆ. ಕೆಂಪು ಮಣ್ಣಿನ ಹೊಲಗಳಲ್ಲಿ ಎತ್ತುಗಳ ಮೂಲಕ ಉಳಿಮೆ ನಡೆಸುತ್ತಿರುವ ರೈತರ ಶ್ರಮ ಗ್ರಾಮೀಣ ಕೃಷಿ ಸಂಸ್ಕೃತಿಯ ಜೀವಂತ ಚಿತ್ರಣವಾಗಿ ಕಂಡುಬರುತ್ತಿದೆ.
ಆಧುನಿಕ ಕೃಷಿ ಯಂತ್ರೋಪಕರಣಗಳ ಬಳಕೆ ಹೆಚ್ಚಾದರೂ, ಹಲವೆಡೆ ರೈತರು ಇಂದಿಗೂ ಎತ್ತುಗಳ ಮೂಲಕ ಉಳಿಮೆ ನಡೆಸುತ್ತಿರುವುದು ವಿಶೇಷವಾಗಿದೆ. ರೈತ ಕುಟುಂಬದ ಮಹಿಳೆಯರೂ ಹೊಲಗದ್ದೆಗಳಲ್ಲಿ ಪಾಲ್ಗೊಂಡು ಬಿತ್ತನೆ ಸಿದ್ಧತೆಯಲ್ಲಿ ಕೈಜೋಡಿಸುತ್ತಿದ್ದು, ಗ್ರಾಮೀಣ ಬದುಕಿನ ಒಗ್ಗಟ್ಟು ಮತ್ತೊಮ್ಮೆ ಅನಾವರಣಗೊಂಡಿದೆ.
ಈ ಬಾರಿ ಸಮಯಕ್ಕೆ ಸರಿಯಾಗಿ ಉತ್ತಮ ಮಳೆಯಾದರೆ ಉತ್ತಮ ಬೆಳೆ ದೊರೆಯುವ ನಿರೀಕ್ಷೆಯಲ್ಲಿ ರೈತರು ಬೀಜ, ರಸಗೊಬ್ಬರ ಹಾಗೂ ಕೃಷಿ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. “ಒಳ್ಳೆಯ ಮಳೆಯಾದರೆ ರೈತನ ಬದುಕು ಹಸನಾಗುತ್ತದೆ” ಎಂಬ ಆಶಾಭಾವನೆ ಗ್ರಾಮೀಣ ಭಾಗಗಳಲ್ಲಿ ವ್ಯಕ್ತವಾಗುತ್ತಿದೆ.
ಹೊಲಗದ್ದೆಗಳಲ್ಲಿ ಮತ್ತೆ ಕೇಳಿಬರುತ್ತಿರುವ ಎತ್ತುಗಳ ಗಂಟೆಗಳ ಶಬ್ದ, ಮಣ್ಣಿನ ಪರಿಮಳ ಹಾಗೂ ರೈತರ ಶ್ರಮ ಗ್ರಾಮೀಣ ಕೃಷಿ ಬದುಕಿಗೆ ಹೊಸ ಚೈತನ್ಯ ತುಂಬಿದೆ.
“ಮಳೆ ನಮ್ಮ ಬದುಕಿನ ಆಶಾಕಿರಣ. ಉತ್ತಮ ಮಳೆಯಾದರೆ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆಯಲ್ಲಿ ಬಿತ್ತನೆ ಕಾರ್ಯ ಆರಂಭಿಸಿದ್ದೇವೆ. ಸರ್ಕಾರವೂ ರೈತರ ನೆರವಿಗೆ ನಿಲ್ಲಬೇಕು.”
— ಬಾರಿಕರ ಪರಶುರಾಮ ಬ್ಯಾಲಾಳು, ರೈತ



