ತುಮಕೂರು: ಪೌತಿ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಕಂದಾಯ ನಿರೀಕ್ಷಕರೊಬ್ಬರು 30 ಸಾವಿರ ರೂ. ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.
ಮಧುಗಿರಿ ಕಸಬಾ ಕಂದಾಯ ನಿರೀಕ್ಷಕ ನಾಗೇಶ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಮುದ್ದೇನಹಳ್ಳಿ ಗ್ರಾಮದ ರೇಣುಕೇಶ್ ಎಂಬುವರು ಪೌತಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಕಂದಾಯ ನಿರೀಕ್ಷಕ ನಾಗೇಶ್ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.
ಲಂಚದ ಹಣದಲ್ಲಿ ಮೊದಲ ಕಂತಾಗಿ 35 ಸಾವಿರ ರೂ. ನೀಡಲಾಗಿತ್ತು ಎನ್ನಲಾಗಿದೆ. ಬಳಿಕ ಎರಡನೇ ಕಂತಾಗಿ 30 ಸಾವಿರ ರೂ. ನೀಡುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
30 ಸಾವಿರ ರೂ. ಸ್ವೀಕರಿಸುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕಂದಾಯ ನಿರೀಕ್ಷಕ ನಾಗೇಶ್ ಅವರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪೊಲೀಸ್ ಇನ್ಸ್ಪೆಕ್ಟರ್ಗಳಾದ ರಾಜು, ನಿರ್ಮಲಾದೇವಿ ಹಾಗೂ ಶಾಂತಿನಾಥ್ ಹೊನ್ನೂರು ಸೇರಿದಂತೆ ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.



