ಬೆಂಗಳೂರು ಗ್ರಾಮಾಂತರ: ಮಗಳ ಮದುವೆಯ ಲಗ್ನಪತ್ರಿಕೆ ಹಂಚಲು ತೆರಳಿದ್ದ ದಂಪತಿಗೆ ಭೀಕರ ಅಪಘಾತ ಸಂಭವಿಸಿದ್ದು, ಪತ್ನಿ ಸ್ಥಳದಲ್ಲೇ ಮೃತಪಟ್ಟರೆ, ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು 42 ವರ್ಷದ ಲಕ್ಷ್ಮೀ ದೇವಿ ಅಲಿಯಾಸ್ ದೇವಮ್ಮ ಎಂದು ಗುರುತಿಸಲಾಗಿದೆ. ಅವರ ಪತಿ ವಿಜಯ್ ಕುಮಾರ್ (48) ಅವರ ಕಾಲು ಅಪಘಾತದಲ್ಲಿ ತುಂಡಾಗಿದ್ದು, ಗಂಭೀರ ಗಾಯಗಳಾಗಿವೆ. ದಂಪತಿ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮದುರೆ ಹೋಬಳಿಯ ಉದ್ದಿಚಿಕ್ಕನಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ.
ಮದುವೆ ಆಮಂತ್ರಣ ಹಂಚಲು ತೆರಳಿದ್ದಾಗ ದುರಂತ
ದಂಪತಿಯ ಪುತ್ರಿ ಇಂದ್ರಾಣಿ ಅವರ ಮದುವೆ ನವೆಂಬರ್ 26 ಮತ್ತು 27ರಂದು ನಿಶ್ಚಯವಾಗಿತ್ತು. ಮಗಳ ಮದುವೆಗೆ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನಪತ್ರಿಕೆ ಹಂಚುವ ಕೆಲಸದಲ್ಲಿ ದಂಪತಿ ಕಳೆದ ಒಂದು ವಾರದಿಂದ ತೊಡಗಿದ್ದರು ಎನ್ನಲಾಗಿದೆ.
ಇಂದು ನೆಲಮಂಗಲದಲ್ಲಿರುವ ಸಂಬಂಧಿಕರಿಗೆ ಮದುವೆ ಆಮಂತ್ರಣ ನೀಡಲು ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಸಿಮೆಂಟ್ ಲಾರಿ ಅವರ ವಾಹನಕ್ಕೆ ಡಿಕ್ಕಿ ಹೊಡೆದು ಹರಿದಿದೆ. ಪರಿಣಾಮ ದೇವಮ್ಮ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯ್ ಕುಮಾರ್ ಅವರ ಕಾಲುಗಳ ಮೇಲೂ ಲಾರಿ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮದುವೆ ಸಂಭ್ರಮದ ಮನೆಯಲ್ಲಿ ಶೋಕ
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಸಾಲ ಮಾಡಿ ಮಗಳ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಮಗಳ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ಅಪಘಾತ ಬರಸಿಡಿಲಿನಂತೆ ಎರಗಿದೆ.
ದೇವಮ್ಮ ಅವರ ಮೃತದೇಹವನ್ನು ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿದೆ. ಗಾಯಾಳು ವಿಜಯ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.










