ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಇಲಾಖಾ ಅಧಿಕಾರಿಗಳು ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಡೆಂಗ್ಯೂ ಜ್ವರ ಹರಡದಂತೆ ಸಾರ್ವಜನಿಕರಿಗೆ ತಿಳುವಳಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿಯನ್ನು ಮೂಡಿಸಬೇಕೆಂದು ತಹಸೀಲ್ದಾರ ಅನಿಲ ಬಡಿಗೇರ ಹೇಳಿದರು.
ಅವರು ಮಂಗಳವಾರ ಶಿರಹಟ್ಟಿಯ ತಹಸೀಲ್ದಾರ ಕಚೇರಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಎಲ್ಲ ಇಲಾಖಾ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಡೆಂಗ್ಯೂ ನಿಯಂತ್ರಣ ಮತ್ತು ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲ ಇಲಾಖೆ ಅಧಿಕಾರಿಗಳು ಈ ಜಾಗೃತಿಯಲ್ಲಿ ಭಾಗವಹಿಸಬೇಕು. ಶಾಲೆಗಳಲ್ಲಿ ಮಕ್ಕಳ ಮೂಲಕ ಅವರ ಪೋಷಕರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿಯೂ ಸಹ ಸ್ವಚ್ಛತೆ ಕಾಪಾಡಬೇಕು. ಪಟ್ಟಣ ಪಂಚಾಯತ ವತಿಯಿಂದ ಸೊಳ್ಳಗಳ ತಾಣ ತೆರವುಗೊಳಿಸಬೇಕು.
ಗಟಾರಗಳನ್ನು ಸ್ವಚ್ಛಗೊಳಿಸಿ ಫಾಗಿಂಗ್ ಮಾಡಿಸಬೇಕು. ನಿತ್ಯವೂ ಮೈಕ್‌ಮೂಲಕ ಜನತೆಗೆ ಅರಿವು ಮೂಡಿಸಬೇಕು. ಯಾವುದೇ ಕಾರಣಕ್ಕೂ ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕೆಂದು ಹೇಳಿದರು.
ನಂತರ ತಾಲೂಕಾ ಪಂಚಾಯತನಲ್ಲೂ ಇಓ ಎಸ್.ಎಸ್. ಕಲ್ಮನಿ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲ ಪಿಡಿಓ ಮತ್ತು ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ, ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ರೋಗ ನಿಯಂತ್ರಣ ಹಾಗೂ ತಡೆಗಟ್ಟುವ ಕುರಿತು ಒಂದು ದಿನದ ತರಬೇತಿಯನ್ನು ಆರೋಗ್ಯ ಇಲಾಖೆ ವತಿಯಿಂದ ನೀಡಲಾಯಿತು.
ಪ.ಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಸಮಾಜ ಕಲ್ಯಾಣಾಧಿಕಾರಿ ಶರಣಯ್ಯ ಹಿರೇಮಠ, ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ, ಬಿಇಓ ಎಚ್.ಎನ್. ನಾಯ್ಕ, ತಾ.ಪಂ ಯೋಜನಾಧಿಕಾರಿ ಎಸ್.ವಿ. ಕೊಂಡಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಭಾಸ್ ದೈಗೊಂಡ ಮಾತನಾಡಿ, ತಾಲೂಕಿನಲ್ಲಿ ಈವರೆಗೆ 2 ಡೆಂಗ್ಯೂ ಪಾಸಿಟಿವ್ ಬಂದಿದ್ದು, ಇಬ್ಬರು ಗುಣಮುಖರಾಗಿದ್ದಾರೆ. 45 ಟೆಸ್ಟಿಂಗ್ ಕಳುಹಿಸಿದ್ದು ಅವೆಲ್ಲವು ನೆಗೆಟಿವ್ ಬಂದಿವೆ. ನಿಂತ ನೀರಿನಲ್ಲಿ ಡೆಂಗೀ ಸೊಳ್ಳೆಗಳು ಉತ್ಪತ್ತಿಯಾಗುವದರಿಂದ ಸ್ವಚ್ಛತೆ ಕಾಪಾಡುವುದು ಅವಶ್ಯ. 3 ದಿನ ನಿರಂತರ ಜ್ವರ, ಮೈ ಕೈ ನೋವಿದ್ದರೆ ವೈದ್ಯರಿಗೆ ತೋರಿಸಬೇಕು. ಶುದ್ಧ, ಕುದಿಸಿ ಆರಿಸಿದ ನೀರನ್ನು ಕುಡಿಯಬೇಕೆಂದು ಹೇಳಿದರು.