- ಇಲಾಖಾ ತನಿಖೆಗೂ ಹಿರಿಯ ಅಧಿಕಾರಿಗಳಿಗೆ ವರದಿ…
ವಿಜಯಸಾಕ್ಷಿ ಸುದ್ದಿ, ಗದಗ
ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಮ್. ಎಮ್. ನದಾಫ್ ಅಮಾನತು ಆದ ಅಧಿಕಾರಿ.
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಆದೇಶ ಹೊರಡಿಸಿದ್ದು, ಇಲಾಖಾ ತನಿಖೆಗೂ ಮೇಲಾಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ ಎಂದು ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.
ಕಳೆದ ಜೂ.4ರಂದು ಜಿಮ್ಸ್ ಆಸ್ಪತ್ರೆಯ ಬಳಿ ಇರುವ ಖಾಸಗಿ ಮೆಡಿಕಲ್ ಶಾಪ್‌ನಲ್ಲಿ ಗಲಾಟೆಯಾಗಿತ್ತು. ಆ ಪ್ರಕರಣದಲ್ಲೂ ಕರ್ತವ್ಯ ಲೋಪ ಎಸಗಿದ ಆರೋಪ ಕೇಳಿ ಬಂದಿತ್ತು. ಜೂ.6ರಂದು ಅಡವಿಸೋಮಾಪೂರ ಸಣ್ಣ ತಾಂಡಾದಲ್ಲಿ ಎರಡು ಕುಟುಂಬಗಳ ನಡುವೆ ಇದ್ದ ವಿವಾದ ಮನೆಗೆ ನುಗ್ಗಿ ಮಹಿಳೆಯರು ಸೇರಿದಂತೆ ಅನೇಕರ ಮೇಲೆ ಹಲ್ಲೆಯಾಗಿತ್ತು.
ಈ ಹಲ್ಲೆ ಪ್ರಕರಣವನ್ನು ಸರಿಯಾಗಿ ನಿಭಾಯಿಸುವಲ್ಲಿ ಲೋಪ ಎಸಗಿದ್ದಲ್ಲದೆ ಲಂಚ ಪಡೆದ ಆರೋಪ ಕೂಡ ಹಲ್ಲೆಗೊಳಗಾದವರಿಂದ ಕೇಳಿ ಬಂದಿತ್ತು.
ನಿನ್ನೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಅಡವಿಸೋಮಾಪೂರ ಸಣ್ಣ ತಾಂಡಾದ ಹಲ್ಲೆಗೊಳಗಾದ ಜನರು ಪೊಲೀಸ್ ಇನ್ಸ್‌ಪೆಕ್ಟರ್ ನದಾಫ್ ದೂರು ಕೊಟ್ಟರೂ ಸರಿಯಾಗಿ ನಿಭಾಯಿಸಿಲ್ಲ.
ಆರೋಪಿತರಿಂದ ಲಂಚ ಪಡೆದಿದ್ದಾರೆ ಎಂದು ತಾಂಡಾದ ಜನರು ಗಲಾಟೆ ಮಾಡಿ ಸ್ಥಳದಲ್ಲಿದ್ದ ಇನ್ಸ್‌ಪೆಕ್ಟರ್ ನದಾಫ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ಎರಡೂ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಎಸ್ಪಿ ಬಿ.ಎಸ್. ನೇಮಗೌಡ ಅವರು ಸಸ್ಪೆಂಡ್ ಮಾಡಿ ಆದೇಶ ಹೊರಡಿದ್ದಾರೆ.