ಬೆಂಗಳೂರು: ವ್ಯಕ್ತಿಯೊಬ್ಬರ ಅನುಮತಿಯಿಲ್ಲದೆ ಅವರ ಖಾಸಗಿ ಫೋಟೋಗಳು ಅಥವಾ ಆಪ್ತ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇತರೆ ಮಾಧ್ಯಮಗಳ ಮೂಲಕ ಹಂಚಿಕೊಳ್ಳುವ ಪ್ರಕರಣಗಳಲ್ಲಿ ತಕ್ಷಣ ಎಫ್‌ಐಆರ್ ದಾಖಲಿಸಬೇಕು ಎಂದು ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಐಜಿಪಿ ಎಂ.ಎ. ಸಲೀಮ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಆನ್‌ಲೈನ್ ಬ್ಲ್ಯಾಕ್‌ಮೇಲ್, ರಿವೆಂಜ್ ಪೋರ್ನೋಗ್ರಫಿ ಹಾಗೂ ಸೆಕ್ಸ್ಟಾರ್ಷನ್‌ಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿಕೊಳ್ಳುವಲ್ಲಿ ಕೆಲ ಪೊಲೀಸ್ ಠಾಣೆಗಳಲ್ಲಿ ವಿಳಂಬ ಅಥವಾ ನಿರಾಕರಣೆ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೂನ್ 16ರಂದು ಈ ಮಹತ್ವದ ಆದೇಶ ಹೊರಡಿಸಲಾಗಿದೆ.
ಕೆಲವು ಪ್ರಕರಣಗಳಲ್ಲಿ ಸಂತ್ರಸ್ತರು ಹಿಂದೆ ಫೋಟೋ ಅಥವಾ ವಿಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣವನ್ನು ಮುಂದಿಟ್ಟುಕೊಂಡು ದೂರು ಸ್ವೀಕರಿಸಲು ನಿರಾಕರಿಸಲಾಗುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಜಿಪಿ, ಚಿತ್ರ ಅಥವಾ ವಿಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡುವುದು ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಒಪ್ಪಿಗೆ ನೀಡುವುದು ಎರಡು ವಿಭಿನ್ನ ಕಾನೂನು ಪರಿಕಲ್ಪನೆಗಳಾಗಿವೆ ಎಂದು ಹೇಳಿದ್ದಾರೆ.
“ಸಂತ್ರಸ್ತರು ಆರಂಭದಲ್ಲಿ ಫೋಟೋ ಅಥವಾ ವಿಡಿಯೊ ತೆಗೆಯಲು ಒಪ್ಪಿಗೆ ನೀಡಿದ್ದರೂ, ನಂತರ ಅವರ ಅನುಮತಿಯಿಲ್ಲದೆ ಅದನ್ನು ಮೂರನೇ ವ್ಯಕ್ತಿಗೆ ಕಳುಹಿಸುವುದು ಅಥವಾ ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಗಂಭೀರ ಅಪರಾಧವಾಗಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಸಂತ್ರಸ್ತರ ಹಿಂದಿನ ಒಪ್ಪಿಗೆಯನ್ನು ನೆಪವನ್ನಾಗಿ ಮಾಡಿಕೊಂಡು ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಬಾರದು ಅಥವಾ ದೂರು ತಿರಸ್ಕರಿಸಬಾರದು ಎಂದು ಡಿಜಿಪಿ ಸ್ಪಷ್ಟ ಸೂಚನೆ ನೀಡಿದ್ದಾರೆ.
ಆದೇಶದಲ್ಲಿ 2017ರ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ಜಸ್ಟಿಸ್ ಕೆ.ಎಸ್. ಪುಟ್ಟಸ್ವಾಮಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ’ ತೀರ್ಪನ್ನು ಉಲ್ಲೇಖಿಸಲಾಗಿದೆ. ವೈಯಕ್ತಿಕ ಖಾಸಗಿತನ, ದೇಹದ ಗೌಪ್ಯತೆ ಹಾಗೂ ವೈಯಕ್ತಿಕ ಮಾಹಿತಿಯ ಹಂಚಿಕೆಯನ್ನು ನಿಯಂತ್ರಿಸುವ ಹಕ್ಕು ಸಂವಿಧಾನದ ವಿಧಿ 21ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ ಎಂದು ನೆನಪಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 77ರ ಪ್ರಕಾರ, ವ್ಯಕ್ತಿಯ ಖಾಸಗಿ ದೃಶ್ಯಗಳನ್ನು ಅನುಮತಿಯಿಲ್ಲದೆ ಹಂಚಿಕೊಳ್ಳುವುದು ‘ವೊಯರಿಸಂ’ (Voyeurism) ಅಪರಾಧದ ವ್ಯಾಪ್ತಿಗೆ ಬರುತ್ತದೆ. ಇಂತಹ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ಸೆಕ್ಸ್ಟಾರ್ಷನ್, ಬ್ಲ್ಯಾಕ್‌ಮೇಲ್, ರಿವೆಂಜ್ ಪೋರ್ನೋಗ್ರಫಿ ಸೇರಿದಂತೆ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳ ಮೇಲೆ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ತೋರಿದರೆ ಅಥವಾ ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ ಸಂಬಂಧಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಜಿಪಿ ಹಾಗೂ ಐಜಿಪಿ ಎಂ.ಎ. ಸಲೀಮ್ ಎಚ್ಚರಿಕೆ ನೀಡಿದ್ದಾರೆ.



