ಭೋಗ-ಮೋಕ್ಷಗಳಿಗೆ ಧರ್ಮವೇ ಮೂಲ: ರಂಭಾಪುರಿ ಶ್ರೀ

0
filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; motionR: 65539; delta:1; bokeh:1; module: photo;hw-remosaic: false;touch: (-1.0, -1.0);sceneMode: 4;cct_value: 0;AI_Scene: (-1, -1);aec_lux: 235.55582;aec_lux_index: 0;albedo: ;confidence: ;motionLevel: 65537;weatherinfo: weather?null, icon:null, weatherInfo:100;temperature: 33;zeissColor: nature;
Spread the love

ವಿಜಯಸಾಕ್ಷಿ ಸುದ್ದಿ, ರಾಯಚೂರು: ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಗುರಿ ತಲುಪಿಸಲು ಗುರು ಬೇಕು. ಜನರ ಮನೆ ಮನಗಳಲ್ಲಿ ಅಡಗಿರುವ ದುಷ್ಟ ದುರ್ಗುಣಗಳನ್ನು ನಾಶ ಮಾಡಿ ಸಭ್ಯತೆ, ಸಂಸ್ಕೃತಿ ಬೆಳೆಸುವುದೇ ಗುರು ಪೀಠಗಳ ಪರಮ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಶುಕ್ರವಾರ ನಗರದ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠ ಲಿಂ. ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮಿಗಳವರ ಲಿಂಗೈಕ್ಯ ಸಾಮರಸ್ಯದ 25ನೇ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಜನರ ಭೋಗ-ಮೋಕ್ಷಗಳಿಗೆ ಧರ್ಮವೇ ಮೂಲ. ಸಮರ ಜೀವನವನ್ನು ಅಮರ ಜೀವನಕ್ಕೆ ಕೊಂಡೊಯ್ಯುವುದೇ ನಿಜವಾದ ಧರ್ಮ. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಪ್ರಗತಿಪರ ವಿಚಾರಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ಅಖಂಡತೆಗೆ ಇರುವ ಬೆಲೆ ಒಡಕಿಗೆ ಸಿಗಲಾರದೆಂಬ ಸತ್ಯವನ್ನರಿತು ಮನುಷ್ಯ ಬಾಳಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಂದೇಶಗಳು ಕಾಲ ಕಾಲಕ್ಕೆ ಭಾವೈಕ್ಯತೆಯ ಬೆಸುಗೆಯನ್ನುಂಟು ಮಾಡಿವೆ. ಕಾಯಕ ಮತ್ತು ದಾಸೋಹದ ಮೂಲಕ ಸಕಲರ ಹಿತವನ್ನು ಕಾಪಾಡಿದ ಧರ್ಮ ವೀರಶೈವ. ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ವಿಶ್ವಬಂಧುತ್ವದ ಶಾಂತಿ ಸಾಮರಸ್ಯದ ಸಂದೇಶ ಸಕಲರಿಗೂ ದಾರಿದೀಪವಾಗಿದೆ ಎಂದರು.

ನೇತೃತ್ವ ವಹಿಸಿದ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಯಾವಾಗಲೂ ನಾಶವಾಗದೇ ಇರುವುದು ಧರ್ಮ. ಅದನ್ನು ನಾಶ ಮಾಡುವ ಅಧಿಕಾರ ಯಾರಿಗೂ, ಯಾವ ಕಾಲಕ್ಕೂ ಇಲ್ಲ. ಪ್ರಾಪಂಚಿಕ ಸಂಬಂಧಗಳು ಶಿಥಿಲಗೊಳ್ಳಬಹುದು. ಆದರೆ ಗುರು ಶಿಷ್ಯರ ಬಾಂಧವ್ಯ ಯಾವತ್ತೂ ಗಟ್ಟಿಯಾಗಿ ಇರುವುದಾಗಿದೆ ಎಂದರು.

ಗಬ್ಬೂರು ಬೂದಿಬಸವ ಶಿವಾಚಾರ್ಯರು, ನೀಲುಗಲ್ ಪಂಚಾಕ್ಷರ ಶಿವಾಚಾರ್ಯರು, ರಾಯಚೂರು ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು, ಸಿಂಧನೂರು ಸೋಮನಾಥ ಶಿವಾಚಾರ್ಯರು, ಕಡೇಚೂರು ಗುರುಮೂರ್ತಿ ಶಿವಾಚಾರ್ಯರು, ರಾಯಚೂರ ವೀರಸಂಗಮೇಶ್ವರ ಶಿವಾಚಾರ್ಯರು, ಛೇಗುಂಟಾ ಡಾ. ಕ್ಷೀರಲಿಂಗ ಶರಣರು, ಬಿಚ್ಚಾಲಿ ವೀರಭದ್ರ ಶಿವಾಚಾರ್ಯರು, ಜಾಲಹಳ್ಳಿ ಜಯಶಾಂತಲಿಂಗ ಶಿವಾಚಾರ್ಯರು, ದೇವದುರ್ಗ ಕಪಿಲಸಿದ್ಧ ಶಿವಾಚಾರ್ಯರು, ಸುಲ್ತಾನಪುರ ವಿರೂಪಾಕ್ಷ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಶಾಸಕ ಡಾ. ಎಸ್. ಶಿವರಾಜ ಪಾಟೀಲ ಮಾತನಾಡಿದರು. ಶಾಸಕ ದದ್ದಲ ಬಸವನಗೌಡ, ದರೂರ ಬಸವನಗೌಡ, ರಾಮಣ್ಣ ಇರಟಗೇರಾ, ಡಾ. ನಿಜಗುಣ ಶಿವಯೋಗಪ್ಪ ಜವಳಿ, ಅಂತರಗಂಗಿ ವೀರಭದ್ರಪ್ಪ, ಎ.ಎಸ್. ಪಾಟೀಲ, ರಮೇಶ ಅಜಗರಣಿ, ಎಸ್.ಎಲ್. ಕೇಶವರೆಡ್ಡಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಬಾಳೆಹೊನ್ನೂರು ಗುರುಕುಲ ಸಾಧಕರಿಂದ ವೇದಘೋಷ, ಅಮರಯ್ಯಸ್ವಾಮಿ ಹಿರೇಮಠ ರಾಜಲದಿನ್ನಿ ಇವರಿಂದ ಪ್ರಾರ್ಥನೆ, ನಿವೃತ್ತ ಪ್ರಾಧ್ಯಾಪಕ ಡಾ. ಚನ್ನಬಸವಸ್ವಾಮಿ ಅವರಿಂದ ಸ್ವಾಗತ ಜರುಗಿತು. ಡಾ. ವಿಜಯರಾಜೇಂದ್ರ ನಿರೂಪಿಸಿದರು. ಭಾಗ್ಯಲಕ್ಷ್ಮಿ ಗಣದಿನ್ನಿ ಹನುಮನಗೌಡ ಇವರಿಂದ ಪ್ರಸಾದ ಸೇವೆ ಜರುಗಿತು.

ಸಮಾರಂಭ ಉದ್ಘಾಟಿಸಿದ ರಾಯಚೂರ ಅ.ಭಾ.ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣ ಭೂಪಾಲ ನಾಡಗೌಡ ಮಾತನಾಡಿ, ಪರಿಶುದ್ಧ ಮತ್ತು ಪವಿತ್ರವಾದ ಜೀವನ ರೂಪಿತಗೊಳ್ಳಲು ಧರ್ಮಪ್ರಜ್ಞೆ ಅವಶ್ಯಕ. ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಎಷ್ಟು ಮುಖ್ಯವೋ ಅಷ್ಟೇ ಧರ್ಮವೂ ಮುಖ್ಯ. ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ ಎಂದರು.


Spread the love

LEAVE A REPLY

Please enter your comment!
Please enter your name here