ಜೈಪುರ: ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅವಳಿ ಮಕ್ಕಳನ್ನು ತಾಯಿಯೇ ತನ್ನ ಪ್ರಿಯಕರ ಹಾಗೂ ಹಿರಿಯ ಮಗನ ಸಹಾಯದಿಂದ ಕೊಲೆ ಮಾಡಿಸಿದ ಆರೋಪ ಕೇಳಿಬಂದಿರುವ ಆಘಾತಕಾರಿ ಘಟನೆ ರಾಜಸ್ಥಾನದ ದೀಗ್ ಜಿಲ್ಲೆಯ ಬದೇಸ್ರಾ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ, ಆಕೆಯ ಪ್ರಿಯಕರ ಹಾಗೂ 16 ವರ್ಷದ ಹಿರಿಯ ಮಗನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆಯಾದ ಅವಳಿ ಮಕ್ಕಳನ್ನು ವಿನಯ್ ಚೌಧರಿ ಹಾಗೂ ವಿಷ್ಣು ಚೌಧರಿ ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ ಇಬ್ಬರೂ ಮನೆಯಿಂದ ಹೊರಗೆ ಹೋಗಿದ್ದರು. ಆದರೆ ಸಾಕಷ್ಟು ಸಮಯ ಕಳೆದರೂ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಮಕ್ಕಳ ತಾಯಿಯ ಸಹೋದರಿ ಹುಡುಕಾಟ ನಡೆಸಿದ್ದರು. ಈ ವೇಳೆ ಮನೆಯ ಸಮೀಪದ ಸ್ಥಳವೊಂದರಲ್ಲಿ ಇಬ್ಬರೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅವಳಿ ಮಕ್ಕಳ ಕುತ್ತಿಗೆಯನ್ನು ಸೀಳಲಾಗಿದ್ದು, ತಲೆಯ ಮೇಲೆಯೂ ಗಾಯದ ಗುರುತುಗಳು ಕಂಡುಬಂದಿವೆ ಎಂದು ದೀಗ್ ಜಿಲ್ಲಾ ಪೊಲೀಸ್ ಅಧೀಕ್ಷಕ ಕಾಂಬಳೆ ಶರಣ್ ಗೋಪಿನಾಥ್ ತಿಳಿಸಿದ್ದಾರೆ. ಮಕ್ಕಳ ಮೃತದೇಹಗಳು ಪತ್ತೆಯಾದ ಬಳಿಕ ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಕುಟುಂಬದೊಳಗಿನ ಸಂಬಂಧಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳು ಲಭ್ಯವಾಗಿವೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಕ್ಕಳ ತಾಯಿ ಪ್ರೀತಿ ಎಂಬಾಕೆ ವ್ಯಕ್ತಿಯೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ಸಂಬಂಧಕ್ಕೆ ಅವಳಿ ಮಕ್ಕಳು ವಿರೋಧ ವ್ಯಕ್ತಪಡಿಸುತ್ತಿದ್ದರು. ಆದರೆ ಆಕೆಯ 16 ವರ್ಷದ ಹಿರಿಯ ಮಗ ಮಾತ್ರ ತಾಯಿಯ ಸಂಬಂಧವನ್ನು ಬೆಂಬಲಿಸುತ್ತಿದ್ದ ಎಂದು ತಿಳಿದುಬಂದಿದೆ.
ಅವಳಿ ಮಕ್ಕಳು ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ಪ್ರೀತಿ ಕೊಲೆಗೆ ಸಂಚು ರೂಪಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದ ಆಕೆ, ಅವನಿಗೆ ಹಾಗೂ ತನ್ನ ಹಿರಿಯ ಮಗನಿಗೆ ಮಕ್ಕಳನ್ನು ಕೊಲೆ ಮಾಡುವಂತೆ ಸೂಚಿಸಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.
ತಾಯಿಯ ಸೂಚನೆಯ ಮೇರೆಗೆ ಆಕೆಯ ಪ್ರಿಯಕರ ಹಾಗೂ 16 ವರ್ಷದ ಹಿರಿಯ ಮಗ ಸೇರಿ ಅವಳಿ ಮಕ್ಕಳನ್ನು ಹತ್ಯೆ ಮಾಡಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನೂ ವಶಕ್ಕೆ ಪಡೆಯಲಾಗಿದ್ದು, ಕೃತ್ಯದ ಹಿಂದಿನ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳನ್ನು ಪತ್ತೆಹಚ್ಚಲು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಅಕ್ರಮ ಸಂಬಂಧದ ವಿಚಾರವಾಗಿ ಕುಟುಂಬದಲ್ಲಿ ಉಂಟಾಗಿದ್ದ ವಿರೋಧವೇ ಇಬ್ಬರು ಮಕ್ಕಳ ಹತ್ಯೆಗೆ ಕಾರಣವಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.










