ನವದೆಹಲಿ: ಜಾಗತಿಕ ತಂತ್ರಜ್ಞಾನ ಕಂಪನಿಯಾದ ಮೈಕ್ರೋಸಾಫ್ಟ್‌ನ ಹಲವು ಆನ್‌ಲೈನ್ ಸೇವೆಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ.

ಭಾರತ ಸೇರಿದಂತೆ ವಿಶ್ವದ 74 ದೇಶಗಳಲ್ಲಿ ಈ ಸಮಸ್ಯೆ ವರದಿಯಾಗಿದ್ದು, ಲಕ್ಷಾಂತರ ಬಳಕೆದಾರರು ತೊಂದರೆ ಅನುಭವಿಸುವಂತಾಗಿದೆ.
ನವೆಂಬರ್ 12ರ ಮಧ್ಯರಾತ್ರಿಯಿಂದಲೇ ಮೈಕ್ರೋಸಾಫ್ಟ್‌ನ ಹಲವು ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಔಟ್‌ಲುಕ್, ಮೈಕ್ರೋಸಾಫ್ಟ್ ಟೀಮ್ಸ್, ಮೈಕ್ರೋಸಾಫ್ಟ್ 365, ಶೇರ್‌ಪಾಯಿಂಟ್ ಮತ್ತು ಕೋಪೈಲಟ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಬಳಕೆದಾರರಿಗೆ ಇ-ಮೇಲ್ ಕಳುಹಿಸಲು, ಸ್ವೀಕರಿಸಲು ಹಾಗೂ ಆನ್‌ಲೈನ್ ಸಭೆಗಳಲ್ಲಿ ಭಾಗವಹಿಸಲು ಸಮಸ್ಯೆಯಾಗಿದೆ.
ಸರ್ವರ್ ಮೇಲಿನ ಒತ್ತಡದಿಂದ ತಾಂತ್ರಿಕ ಸಮಸ್ಯೆ:
ಈ ಸಮಸ್ಯೆಗೆ ಸೈಬರ್ ದಾಳಿ ಕಾರಣವಲ್ಲ ಎಂದು ತಿಳಿದುಬಂದಿದೆ. ಬದಲಾಗಿ ಸರ್ವರ್‌ಗಳ ಮೇಲಿನ ಅತಿಯಾದ ಒತ್ತಡ ಮತ್ತು ಕಾನ್ಫಿಗರೇಶನ್ ದೋಷದಿಂದ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಎನ್ನಲಾಗಿದೆ. ಇದರಿಂದ ಕೆಲವು ಸರ್ವರ್‌ಗಳು ಸ್ಥಗಿತಗೊಂಡಿವೆ. ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲು ಇನ್ನೂ 48 ಗಂಟೆಗಳವರೆಗೆ ಸಮಯ ಬೇಕಾಗಬಹುದು ಎಂದು ಕಂಪನಿ ತಿಳಿಸಿದೆ.
ವಿಮಾನಯಾನ ಸೇವೆಗಳ ಮೇಲೂ ಪರಿಣಾಮ:
ಮೈಕ್ರೋಸಾಫ್ಟ್ ಸೇವೆಗಳಲ್ಲಿನ ವ್ಯತ್ಯಯ ವಿಮಾನಯಾನ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ದೆಹಲಿಯಿಂದ ಕಾರ್ಯಾಚರಣೆ ನಡೆಸಬೇಕಿದ್ದ ಸ್ಪೈಸ್‌ಜೆಟ್‌ನ ಮೂರು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ದೆಹಲಿ ವಿಮಾನ ನಿಲ್ದಾಣವು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸುವಂತೆ ಸೂಚಿಸಿದೆ.
ಇಂಡಿಗೋ ಮತ್ತು ಆಕಾಶ ಏರ್ ಸಂಸ್ಥೆಗಳು ಕೂಡ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಸಲಹೆಗಳನ್ನು ನೀಡಿವೆ. ಮೈಕ್ರೋಸಾಫ್ಟ್‌ನ ತಾಂತ್ರಿಕ ಸಮಸ್ಯೆಯಿಂದ ಇ-ಮೇಲ್, ಆನ್‌ಲೈನ್ ಸಂವಹನ ಹಾಗೂ ವಿಮಾನಯಾನ ಸೇರಿದಂತೆ ಹಲವು ಸೇವೆಗಳಿಗೆ ಅಡ್ಡಿಯಾಗಿದೆ. ಸೇವೆಗಳು ಸಂಪೂರ್ಣವಾಗಿ ಯಾವಾಗ ಸಹಜ ಸ್ಥಿತಿಗೆ ಮರಳಲಿವೆ ಎಂಬುದನ್ನು ಬಳಕೆದಾರರು ಎದುರು ನೋಡುತ್ತಿದ್ದಾರೆ.










