ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮಲಬದ್ಧತೆಯೂ ಒಂದು.

ಹೊಟ್ಟೆ ಸರಿಯಾಗಿ ಖಾಲಿಯಾಗದಿರುವುದು, ಹೊಟ್ಟೆ ಉಬ್ಬರ, ಭಾರವಾದ ಅನುಭವ, ಸೆಳೆತ ಹಾಗೂ ವಾಕರಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ನಾರಿನಂಶ ಹೆಚ್ಚಿರುವ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು ಮತ್ತು ದೈಹಿಕ ಚಟುವಟಿಕೆಗಳಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ಆದರೆ ಕೆಲವರಿಗೆ ಇಷ್ಟೆಲ್ಲ ಮುನ್ನೆಚ್ಚರಿಕೆ ವಹಿಸಿದರೂ ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದಿಲ್ಲ. ಇದಕ್ಕೆ ದೀರ್ಘಕಾಲದ ಮಾನಸಿಕ ಒತ್ತಡವೂ ಕಾರಣವಾಗಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಮಾನಸಿಕ ಒತ್ತಡಕ್ಕೂ ಮಲಬದ್ಧತೆಗೂ ಸಂಬಂಧವೇನು?
ಐಎಸ್ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟೋಬಿಲಿಯರಿ ಸೈನ್ಸಸ್ ವಿಭಾಗದ ನಿರ್ದೇಶಕ ಹಾಗೂ ಮುಖ್ಯಸ್ಥರಾದ ಡಾ. ಶುಭಂ ವಾತ್ಸ್ಯ ಅವರ ಪ್ರಕಾರ, ನಿರಂತರ ಮಾನಸಿಕ ಒತ್ತಡವು ಜೀರ್ಣಾಂಗ ವ್ಯವಸ್ಥೆಯ ಸಹಜ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಆಹಾರದಲ್ಲಿ ನಾರಿನಂಶ ಹೆಚ್ಚಿಸಿಕೊಂಡು, ಸಾಕಷ್ಟು ನೀರು ಕುಡಿಯುವುದರ ಜೊತೆಗೆ ಔಷಧಗಳನ್ನು ಸೇವಿಸಿದರೂ ಕೆಲವರಲ್ಲಿ ಮಲಬದ್ಧತೆ ಮುಂದುವರಿಯಬಹುದು. ಇಂತಹ ಸಂದರ್ಭದಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕು.
ಒತ್ತಡದಿಂದ ಕರುಳಿನ ಚಲನೆ ಮೇಲೆ ಪರಿಣಾಮ:
ದೀರ್ಘಕಾಲ ಒತ್ತಡದಲ್ಲಿರುವಾಗ ದೇಹದ ನರಮಂಡಲದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇದರಿಂದ ಕರುಳಿನ ಸಹಜ ಚಲನೆ ನಿಧಾನಗೊಳ್ಳುವ ಸಾಧ್ಯತೆಯಿದೆ. ಪರಿಣಾಮವಾಗಿ ಮಲವಿಸರ್ಜನೆಯ ಕ್ರಮದಲ್ಲಿ ವ್ಯತ್ಯಯ ಉಂಟಾಗಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಬಹುದು.
ಅಲ್ಲದೆ, ಒತ್ತಡದಲ್ಲಿರುವ ಕೆಲವರು ಸಮಯಕ್ಕೆ ಸರಿಯಾಗಿ ಊಟ ಮಾಡುವುದಿಲ್ಲ. ದೈಹಿಕ ಚಟುವಟಿಕೆ ಕಡಿಮೆ ಮಾಡುತ್ತಾರೆ ಹಾಗೂ ಮಲವಿಸರ್ಜನೆಯ ಬಯಕೆಯನ್ನು ಮುಂದೂಡುತ್ತಾರೆ. ಕೆಲವರಿಗೆ ಶೌಚಾಲಯದಲ್ಲಿ ಕುಳಿತಾಗ ಸೊಂಟದ ಕೆಳಭಾಗದ ಸ್ನಾಯುಗಳನ್ನು ಸಡಿಲಗೊಳಿಸಲು ಕಷ್ಟವಾಗಬಹುದು. ಇಂತಹ ಅಭ್ಯಾಸಗಳು ಕೂಡ ಮಲಬದ್ಧತೆ ಸಮಸ್ಯೆಯನ್ನು ಹೆಚ್ಚಿಸಬಹುದು.
ಒತ್ತಡ ನಿಯಂತ್ರಣಕ್ಕೆ ಈ ಕ್ರಮಗಳನ್ನು ಅನುಸರಿಸಿ:
ಮಲಬದ್ಧತೆ ಸಮಸ್ಯೆಯನ್ನು ನಿಯಂತ್ರಿಸುವುದರ ಜೊತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು ಕೂಡ ಮುಖ್ಯವಾಗಿದೆ. ಇದಕ್ಕಾಗಿ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳಬಹುದು.
- ಪ್ರತಿದಿನ ನಡಿಗೆ, ಸೈಕ್ಲಿಂಗ್, ಈಜು ಅಥವಾ ಲಘು ವ್ಯಾಯಾಮ ಮಾಡಿ.
- ಬಾಲಾಸನ, ಭ್ರಮರಿ ಹಾಗೂ ಅನುಲೋಮ ವಿಲೋಮದಂತಹ ಯೋಗ ಮತ್ತು ಉಸಿರಾಟದ ಅಭ್ಯಾಸಗಳನ್ನು ಮಾಡಿ.
- ಪ್ರತಿದಿನ 7ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ.
- ಕೆಫೀನ್ ಮತ್ತು ಮದ್ಯಪಾನದ ಬಳಕೆಯನ್ನು ಮಿತಿಗೊಳಿಸಿ.
- ಪ್ರಕೃತಿಯ ನಡುವೆ ಸಮಯ ಕಳೆಯಿರಿ ಹಾಗೂ ಇಷ್ಟವಾದ ಸಂಗೀತ ಆಲಿಸಿ.
- ಮನಸ್ಸಿನಲ್ಲಿರುವ ಭಾವನೆಗಳನ್ನು ನಂಬಿಕಸ್ಥ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸಮಸ್ಯೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ:
ಮಲಬದ್ಧತೆ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ದೀರ್ಘಕಾಲ ಮಲವಿಸರ್ಜನೆ ಸರಿಯಾಗಿ ಆಗದಿದ್ದರೆ, ತೀವ್ರ ಹೊಟ್ಟೆನೋವು ಕಾಣಿಸಿಕೊಂಡರೆ ಅಥವಾ ಮಲದಲ್ಲಿ ರಕ್ತ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆಹಾರ ಪದ್ಧತಿ, ನೀರಿನ ಸೇವನೆ ಮತ್ತು ವ್ಯಾಯಾಮದ ಜೊತೆಗೆ ಮಾನಸಿಕ ಆರೋಗ್ಯದ ಕಡೆಗೂ ಗಮನ ನೀಡುವುದು ಅಗತ್ಯವಾಗಿದೆ.










