ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಐದು ದಶಕಗಳ ರಾಜಕೀಯ ಹೋರಾಟ, ಸಾಮಾಜಿಕ ನ್ಯಾಯದ ಪರ ಬದ್ಧತೆ ಹಾಗೂ ಜನಪರ ಆಡಳಿತಕ್ಕಾಗಿ ಸಿದ್ದರಾಮಯ್ಯ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಡಿಕೆಶಿ, ಮುಂದಿನ ದಿನಗಳಲ್ಲೂ ಅವರ ಮಾರ್ಗದರ್ಶನ ಅಗತ್ಯ ಎಂದು ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಡಿಕೆ ಶಿವಕುಮಾರ್, “ದೇವರು ವರ ಅಥವಾ ಶಾಪ ನೀಡುವುದಿಲ್ಲ, ಆತ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದೇ ವ್ಯಕ್ತಿಯ ಸಾಧನೆಯನ್ನು ನಿರ್ಧರಿಸುತ್ತದೆ. ಈ ಮಾತಿಗೆ ಸಿದ್ದರಾಮಯ್ಯ ಅವರ ಜೀವನವೇ ಅತ್ಯುತ್ತಮ ಉದಾಹರಣೆ” ಎಂದು ಹೇಳಿದ್ದಾರೆ.
ಮೈಸೂರು ಜಿಲ್ಲೆಯ ಸಣ್ಣ ಹಳ್ಳಿಯಿಂದ ರಾಜಕೀಯ ಪಯಣ ಆರಂಭಿಸಿ, ರಾಜ್ಯದ ಅತ್ಯಂತ ಪ್ರಭಾವಿ ನಾಯಕರಾಗಿ ಬೆಳೆದಿರುವ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಬಡವರ ಪರ ಧ್ವನಿಯಾಗಿದ್ದಾರೆ ಎಂದು ಡಿಕೆಶಿ ಬಣ್ಣಿಸಿದ್ದಾರೆ.
“2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾದ ದಿನದಿಂದ ಇಂದಿನವರೆಗೂ ಸಿದ್ದರಾಮಯ್ಯ ಅವರು ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಭದ್ರ ಸ್ತಂಭವಾಗಿ ನಿಂತಿದ್ದಾರೆ. ಸಚಿವನಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಅವರ ಅನುಭವ ಮತ್ತು ರಾಜಕೀಯ ದೂರದೃಷ್ಟಿಯಿಂದ ಕಲಿಯುವ ಅವಕಾಶ ನನಗೆ ದೊರಕಿದೆ” ಎಂದು ಅವರು ಉಲ್ಲೇಖಿಸಿದ್ದಾರೆ.
ಕೊನೆಯಲ್ಲಿ “ವೇಗವಾಗಿ ನಡೆಯಬೇಕಾದರೆ ಒಬ್ಬನೇ ನಡೆಯಬೇಕು, ದೂರ ಸಾಗಬೇಕಾದರೆ ಜೊತೆಯಾಗಿ ನಡೆಯಬೇಕು” ಎಂಬ ನಾಣ್ಣುಡಿಯ ಮೂಲಕ ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಮುಂದುವರಿಯುವ ಸಂದೇಶ ನೀಡಿದ್ದಾರೆ.



