ಚಿತ್ರದುರ್ಗ: ಹಣ ಡಬ್ಲಿಂಗ್ ದಂಧೆಯ ಕರಾಳ ಮುಖವನ್ನು ಬಯಲಿಗೆಳೆದಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ. ಈ ಸಂಬಂಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ್ ಅಲಿಯಾಸ್ ‘ಕೋಟಾನೋಟ್’ ಚಂದ್ರನನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಮಲ್ಲಿಕಾರ್ಜುನ ಅವರಿಗೆ ಸಾಲ ವ್ಯವಸ್ಥೆ ಮಾಡಿಕೊಡುವುದಾಗಿ ನಂಬಿಸಿ, ಅವರ ಬ್ಯಾಂಕ್ ಖಾತೆ ಮೂಲಕ ಅಕ್ರಮ ಹಣಕಾಸು ವ್ಯವಹಾರ ನಡೆಸಲಾಗುತ್ತಿತ್ತು. ಈ ದಂಧೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಲ್ಲಿಕಾರ್ಜುನ ಸಾಕ್ಷಿಯಾಗಿದ್ದ ಕಾರಣ ಆರೋಪಿಗಳು ಆತಂಕಗೊಂಡಿದ್ದರು ಎನ್ನಲಾಗಿದೆ.
ಏಪ್ರಿಲ್ 14ರಂದು ಅಪಘಾತದಲ್ಲಿ ಗಾಯಗೊಂಡಿದ್ದ ಮಲ್ಲಿಕಾರ್ಜುನ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಚಂದ್ರಶೇಖರ್‌ಗೆ ಸೇರಿದ ತೋಟದಲ್ಲಿ ಇರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಮೇ 1ರಂದು ಅದೇ ತೋಟದ ಮನೆಯಲ್ಲಿ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಮೃತನ ಪತ್ನಿ ಆಶಾ ನೀಡಿದ ದೂರಿನಲ್ಲಿ, ಅಕ್ರಮ ಹಣಕಾಸು ದಂಧೆಯ ರಹಸ್ಯ ಮುಚ್ಚಿಹಾಕಲು ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ದೂರಿನ ಆಧಾರದ ಮೇಲೆ ಚಂದ್ರಶೇಖರ್ ಮತ್ತು ಸದಾಶಿವ ನಾಯಕರನ್ನು ಬಂಧಿಸಲಾಗಿದೆ.
ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿರುವ ಚಂದ್ರಶೇಖರ್ ಪುತ್ರ ವಿನಾಯಕ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಅಚ್ಚರಿಯ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ.



